ADVERTISEMENT

ಪೆಗಾಸಸ್‌ ತನಿಖೆಗೆ ಕೇಂದ್ರ ಸಹಕರಿಸಲಿಲ್ಲ: ಸಮಿತಿ ಆರೋಪ

ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ ನಿವೃತ್ತ ನ್ಯಾಯಮೂರ್ತಿ ಆರ್‌.ವಿ.ರವೀಂದ್ರನ್‌ ನೇತೃತ್ವದ ಸಮಿತಿ 

ಪಿಟಿಐ
Published 25 ಆಗಸ್ಟ್ 2022, 14:26 IST
Last Updated 25 ಆಗಸ್ಟ್ 2022, 14:26 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ‘ಪೆಗಾಸಸ್‌ಕುತಂತ್ರಾಂಶವನ್ನು ಕಾನೂನು ಬಾಹಿರವಾಗಿ ಬಳಕೆ ಮಾಡಿರುವ ಕುರಿತ ತನಿಖೆಗೆ ಕೇಂದ್ರ ಸರ್ಕಾರವು ಯಾವುದೇ ರೀತಿಯ ಸಹಕಾರ ನೀಡಿಲ್ಲ’ ಎಂದು ಈ ಸಂಬಂಧ ತನಿಖೆ ನಡೆಸಲು ರಚನೆಯಾಗಿದ್ದ ಸಮಿತಿಯು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ತನ್ನ ವರದಿಯಲ್ಲಿ ಆರೋಪಿಸಿದೆ.

ಈ ಕುರಿತು ತನಿಖೆ ಕೈಗೊಂಡಿದ್ದನಿವೃತ್ತ ನ್ಯಾಯಮೂರ್ತಿ ಆರ್‌.ವಿ.ರವೀಂದ್ರನ್‌ ನೇತೃತ್ವದ ಸಮಿತಿಯು ನ್ಯಾಯಾಲಯಕ್ಕೆ ಗುರುವಾರ ಅಂತಿಮ ವರದಿ ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತುಹಿಮಾ ಕೊಹ್ಲಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಇದರ ಪರಿಶೀಲನೆ ನಡೆಸಿತು.

‘ಪರೀಕ್ಷೆಗಾಗಿ ತಾಂತ್ರಿಕ ಸಮಿತಿಗೆ ಒಟ್ಟು 29 ಮೊಬೈಲ್‌ಗಳನ್ನು ಒದಗಿಸಲಾಗಿತ್ತು. ಈ ಪೈಕಿ ಐದು ಮೊಬೈಲ್‌ಗಳಲ್ಲಿ ಒಂದು ಬಗೆಯ ಕುತಂತ್ರಾಂಶ ಪತ್ತೆಯಾಗಿದೆ. ಬೇಹುಗಾರಿಕೆ ನಡೆಸಲೆಂದೇ ಇದನ್ನು ಬಳಸಲಾಗಿದೆಯೇ ಎಂಬುದು ಖಾತರಿಯಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಸಮಿತಿಯು ಒಟ್ಟು ಮೂರು ಹಂತಗಳನ್ನೊಳಗೊಂಡ ಸುದೀರ್ಘ ವರದಿ ಸಲ್ಲಿಸಿದೆ. ಇದನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸದಂತೆ ಮನವಿಯನ್ನೂ ಮಾಡಲಾಗಿದೆ’ ಎಂದು ಪೀಠ ಹೇಳಿದೆ.

ADVERTISEMENT

‘ನಾಗರಿಕರ ಗೋಪ್ಯತೆಯ ಹಕ್ಕು ರಕ್ಷಿಸುವ, ಭವಿಷ್ಯದಲ್ಲಿ ಕೈಗೊಳ್ಳಬೇಕಿರುವ ಕ್ರಮ ಹಾಗೂ ಹೊಣೆಗಾರಿಕೆ ವಿಚಾರವಾಗಿ ವರದಿಯಲ್ಲಿ ಹಲವು ಸಲಹೆಗಳನ್ನು ನೀಡಲಾಗಿದೆ. ಗೋಪ್ಯತೆಯ ರಕ್ಷಣೆ ಹಾಗೂ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಸುಧಾರಿಸುವ ಸಲುವಾಗಿ ಕಾನೂನಿನಲ್ಲಿ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೇಶದ ಸೈಬರ್‌ ಭದ್ರತೆಯನ್ನು ಹೆಚ್ಚಿಸುವುದರ ಜೊತೆಗೆ ಅದರ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಸಲಹೆಯನ್ನೂ ಸಮಿತಿ ನೀಡಿದೆ’ ಎಂದು ಪೀಠ ತಿಳಿಸಿದೆ.

‘ಮರುಪರಿಶೀಲಿಸಿದ ವರದಿಯನ್ನು ದೂರುದಾರರಿಗೆ ಒದಗಿಸಬೇಕು’ ಎಂದುಹಿರಿಯ ವಕೀಲರಾದ ಕಪಿಲ್‌ ಸಿಬಲ್‌ ಹಾಗೂ ರಾಕೇಶ್‌ ದ್ವಿವೇದಿ ಅವರು ಪೀಠವನ್ನು ಒತ್ತಾಯಿಸಿದರು.‘ವರದಿಯನ್ನು ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ತನಿಖಾ ಸಮಿತಿಗೆ ಕೇಂದ್ರ ಸರ್ಕಾರ ಸಹಕರಿಸಿಲ್ಲ ಎಂದು ಪೀಠ ಹೇಳಿದಾಗ, ‘ಈ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪ್ರತಿಕ್ರಿಯಿಸಿದರು.

ನಾಲ್ಕು ವಾರಗಳ ಬಳಿಕ ಈ ಸಂಬಂಧದ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿತು.

ಇಸ್ರೇಲ್‌ನ ಕುತಂತ್ರಾಂಶಪೆಗಾಸಸ್‌ ಬಳಸಿವಿರೋಧ ಪಕ್ಷಗಳ ನಾಯಕರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಹಾಗೂ ಇತರರ ಮೇಲೆ ಬೇಹುಗಾರಿಕೆ ನಡೆಸಿರುವ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು.

ಈ ಸಂಬಂಧ ತನಿಖೆಗಾಗಿ ಸೈಬರ್‌ ಭದ್ರತೆ, ಡಿಜಿಟಲ್‌ ವಿಧಿವಿಜ್ಞಾನ, ನೆಟ್ವರ್ಕ್‌ ಮತ್ತು ಹಾರ್ಡ್‌ವೇರ್‌ ವಿಷಯದಲ್ಲಿ ಪರಿಣತಿ ಹೊಂದಿದ್ದ ನವೀನ್‌ಕುಮಾರ್ ಚೌಧರಿ, ಪಿ.ಪ್ರಬಹರನ್‌ ಮತ್ತು ಅಶ್ವಿನ್‌ ಅನಿಲ್‌ ಗುಮಾಸ್ತೆ ಅವರನ್ನೊಳಗೊಂಡ ಸಮಿತಿಯೊಂದನ್ನು ಸುಪ್ರೀಂ ಕೋರ್ಟ್‌ ಹೋದ ವರ್ಷ ರಚಿಸಿತ್ತು. ನಿವೃತ್ತ ನ್ಯಾಯಮೂರ್ತಿ ರವೀಂದ್ರನ್‌ ಅವರಿಗೆ ಇದರ ಮೇಲ್ವಿಚಾರಣೆ ಜವಾಬ್ದಾರಿ ನೀಡಲಾಗಿತ್ತು. ಮಾಜಿ ಐಪಿಎಸ್‌ ಅಧಿಕಾರಿ ಅಲೋಕ್‌ ಜೋಶಿ ಹಾಗೂ ಸೈಬರ್‌ ಭದ್ರತಾ ತಜ್ಞ ಸಂದೀಪ್‌ ಒಬೆರಾಯ್‌ ಅವರನ್ನು ಇವರ ಸಹಾಯಕರನ್ನಾಗಿ ನೇಮಿಸಲಾಗಿತ್ತು.

---

ಪೆಗಾಸಸ್‌ ವಿಚಾರದಲ್ಲಿ ಕೇಂದ್ರ ಸರ್ಕಾರ ಮೌನ ವಹಿಸಿರುವುದನ್ನೇ ಅದರ ಉತ್ತರವೆಂದು ಸುಪ್ರೀಂ ಕೋರ್ಟ್‌ ಪರಿಗಣಿಸಬೇಕು. ಸರ್ಕಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

- ಗೌರವ್‌ ವಲ್ಲಭ,ಕಾಂಗ್ರೆಸ್‌ ವಕ್ತಾರ

ರಾಹುಲ್‌ ಗಾಂಧಿ ಅವರು ಪೆಗಾಸಸ್‌ ವಿಚಾರ ಮುಂದಿಟ್ಟುಕೊಂಡು ಪ್ರಧಾನಿ ಮೋದಿ ಅವರ ವಿರುದ್ಧ ದೇಶದ್ರೋಹದಂತಹ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಕುರಿತು ರಾಹುಲ್‌ ಮತ್ತು ಕಾಂಗ್ರೆಸ್‌ ಈಗ ಕ್ಷಮೆ ಕೇಳಲಿದೆಯೇ?

- ರವಿಶಂಕರ್‌ ಪ್ರಸಾದ್‌, ಬಿಜೆಪಿ ಮುಖಂಡ

---

‘ಪ್ರಜಾಪ್ರಭುತ್ವ ದುರ್ಬಲಗೊಳಿಸಲು ಪೆಗಾಸಸ್ ಬಳಸಿದ ಕೇಂದ್ರ’

‘ಪೆಗಾಸಸ್‌ ಕುರಿತ ತನಿಖೆಗೆ ಕೇಂದ್ರ ಸರ್ಕಾರ ಸಹಕರಿಸಲಿಲ್ಲ ಎಂದು ತನಿಖಾ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ. ಕೇಂದ್ರದ ಈ ಧೋರಣೆಯು ಅದು ಪೆಗಾಸಸ್‌ ಕುತಂತ್ರಾಂಶ ಬಳಸಿಕೊಂಡು ಪ್ರಜಾಪ್ರಭುತ್ವ ದುರ್ಬಲಗೊಳಿಸಲು ಯತ್ನಿಸಿತ್ತು ಎಂಬುದನ್ನು ಒಪ್ಪಿಕೊಂಡಂತಿದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

‘ಕೇಂದ್ರವು ಪೆಗಾಸಸ್‌ ಅನ್ನು ಅಸ್ತ್ರವಾಗಿ ಬಳಸಿಕೊಂಡು ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶಪಡಿಸಲು ಮುಂದಾಗಿತ್ತು. ಪೆಗಾಸಸ್‌ ಈ ದೇಶದ ಕಾನೂನು ಹಾಗೂ ಸಂವಿಧಾನಕ್ಕೆ ವಿರೋಧವಾದುದು. ಕೇಂದ್ರ ತಪ್ಪು ಮಾಡಿದೆ. ಹೀಗಾಗಿ ಮೌನಕ್ಕೆ ಜಾರಿದೆ. ಕೆಲವೊಮ್ಮೆ ಮೌನವೇ ಎಲ್ಲದಕ್ಕೂ ಉತ್ತರವಾಗುತ್ತದೆ’ ಎಂದು ಕಾಂಗ್ರೆಸ್‌ ವಕ್ತಾರ ಗೌರವ್‌ ವಲ್ಲಭ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

‘ರಾಹುಲ್‌, ಕಾಂಗ್ರೆಸ್‌ ಕ್ಷಮೆ ಕೇಳಲಿ’

‘ಪರೀಕ್ಷೆಗೊಳಪಡಿಸಿದ್ದ ಮೊಬೈಲ್‌ಗಳ ಪೈಕಿ ಐದರಲ್ಲಿ ಒಂದು ಬಗೆಯ ಕುತಂತ್ರಾಂಶ ಪತ್ತೆಯಾಗಿದೆ. ಬೇಹುಗಾರಿಕೆ ನಡೆಸಲೆಂದೇ ಇದನ್ನು ಬಳಸಲಾಗಿದೆಯೇ ಎಂಬುದು ಖಾತರಿಯಾಗಿಲ್ಲ ಎಂದು ತನಿಖಾ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ. ಕೇಂದ್ರವು ಯಾರ ಮೇಲೂ ಗೂಢಚರ್ಯೆ ನಡೆಸಿಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಹೀಗಾಗಿ ಕಾಂಗ್ರೆಸ್‌ ಹಾಗೂ ಆ ಪಕ್ಷದ ಮುಖಂಡ ರಾಹುಲ್‌ ಗಾಂಧಿ ಕ್ಷಮೆ ಕೇಳಬೇಕು’ ಎಂದು ಬಿಜೆಪಿ ಒತ್ತಾಯಿಸಿದೆ.

‘ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್‌ ಹಲವು ಸುಳ್ಳುಗಳನ್ನು ಹೇಳಿತ್ತು. ಈಗ ಆ ಪಕ್ಷದ ಬಣ್ಣ ಬಯಲಾಗಿದೆ’ ಎಂದು ಬಿಜೆಪಿ ಮುಖಂಡ ರವಿಶಂಕರ್‌ ಪ್ರಸಾದ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.