ಗೃಹಿಣಿಯರೊಂದಿಗೆ ಮಾರುಕಟ್ಟೆಗೆ ಭೇಟಿ ನೀಡಿ, ತರಕಾರಿ ಖರೀದಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
–ಪಿಟಿಐ ಚಿತ್ರ
ನವದೆಹಲಿ: ‘ಬೆಲೆ ಏರಿಕೆಯಿಂದಾಗಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ನಿತ್ಯದ ತಮ್ಮ ಬೇಕು–ಬೇಡಗಳನ್ನು ಅದುಮಿಟ್ಟುಕೊಂಡು ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಸರ್ಕಾರ ಮಾತ್ರ ಕುಂಬಕರ್ಣನಂತೆ ನಿದ್ರಿಸುತ್ತಿದೆ’ ಎಂದು ಲೊಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ದೂರಿದರು.
ಇಲ್ಲಿನ ಗಿರಿ ನಗರದಲ್ಲಿರುವ ತರಕಾರಿ ಮಾರುಕಟ್ಟೆಗೆ ಇತ್ತೀಚೆಗೆ ಭೇಟಿ ನೀಡಿದ್ದ ರಾಹುಲ್, ಗೃಹಿಣಿಯರೊಂದಿಗೆ ಖರೀದಿಗೆ ತೆರಳಿದ್ದರು. ಬಳಿಕ ಹಲವು ಮಹಿಳೆಯ ಜೊತೆ ಬೆಲೆಏರಿಕೆಯ ಕುರಿತು ಮಾತುಕತೆ ನಡೆಸಿದ್ದರು. ಮಹಿಳೆಯರು ತಮ್ಮ ಕಷ್ಟಗಳನ್ನು ಅವರೊಂದಿಗೆ ಹಂಚಿಕೊಂಡಿದ್ದರು. ಈ ವಿಡಿಯೊವನ್ನು ರಾಹುಲ್ ಮಂಗಳವಾರ ಬಿಡುಗಡೆ ಮಾಡಿದ್ದಾರೆ.
‘ನಾನು ಇತ್ತೀಚೆಗೆ ಸ್ಥಳೀಯ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿದ್ದೆ. ಈ ಹಿಂದೆ ಬೆಳ್ಳುಳ್ಳಿ ಬೆಲೆಯು ಕೆ.ಜಿಗೆ ₹40 ಇತ್ತು. ಈಗ ಇದರ ಬೆಲೆ ₹400ಕ್ಕೆ ಏರಿಕೆಯಾಗಿದೆ. ಹಸಿಬಟಾಣಿ ಬೆಲೆಯು ಈಗ ಕೆ.ಜಿಗೆ ₹120 ತಲುಪಿದೆ. ಇಂಥ ಬೆಲೆಏರಿಕೆಯು ಜನರ ಬಜೆಟ್ ಅನ್ನು ಬುಡಮೇಲು ಮಾಡಿದೆ’ ಎಂದು ವಿಡಿಯೊದೊಂದಿಗೆ ಪೋಸ್ಟ್‌ವೊಂದನ್ನು ಅವರು ಹಂಚಿಕೊಂಡಿದ್ದಾರೆ.
‘ನಿಮಗೆ ಮಾರುಕಟ್ಟೆಯ ಬಗ್ಗೆ ತಿಳಿದಿದೆ. ಬೆಲೆಏರಿಕೆಯಿಂದ ನೀವು ಅನುಭವಿಸುತ್ತಿರುವ ಸಂಕಷ್ಟಗಳನ್ನು, ನಿಮ್ಮ ಸಮಸ್ಯೆಗಳನ್ನು ನಮ್ಮ ಬಳಿ ಹಂಚಿಕೊಳ್ಳಿ’ ಎಂದು ಅವರು ಜನರಿಗೆ ಕರೆ ನೀಡಿದ್ದಾರೆ.
ತರಕಾರಿಗಳ ಬೆಲೆಯು ಏರಿಕೆಯಾಗಿದ್ದಕ್ಕೆ ನಾವು ನಮ್ಮ ಊಟದ ಪ್ರಮಾಣವನ್ನೇ ತಗ್ಗಿಸಿಕೊಂಡಿದ್ದೇವೆ. ಮೊದಲು ಖರೀದಿಸುತ್ತಿದ್ದ ತರಕಾರಿಗಳನ್ನು ಈಗ ಖರೀದಿಸಲು ಸಾಧ್ಯವಾಗುತ್ತಿಲ್ಲ. ವಿವಿಧ ವಸ್ತುಗಳ ಬೆಲೆಗಳು ಏರಿಕೆಯಾಗುತ್ತಲೇ ಇದೆ. ಆದರೆ, ನಮ್ಮ ಸಂಬಳ ಮಾತ್ರ ಹಾಗೆಯೇ ಏರಿಕೆಯಾಗದೆಯೇ ಉಳಿದುಬಿಟ್ಟಿದೆ.-ರಾಹುಲ್ ಅವರು ಹಂಚಿಕೊಂಡ ವಿಡಿಯೊದಲ್ಲಿ ಮಹಿಳೆಯರು ಹೇಳಿದ್ದು
ಮೋದಿ ಸರ್ಕಾರವು ಫೋಷಿಸಿದ್ದ ಬುಲೆಟ್ ರೈಲು ಬರಲಿಲ್ಲ. ಆದರೆ, ಬೆಲೆಏರಿಕೆ ಪ್ರಮಾಣವು ಬುಲೆಟ್ ರೈಲಿನ ವೇಗಕ್ಕಿಂತಲೂ ವೇಗವಾಗಿ ಮೇಲೇರುತ್ತಿದೆ.-ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.