ಮೋಹನ್ ಭಾಗವತ್
– ಪಿಟಿಐ ಚಿತ್ರ
ಮುಂಬೈ: ‘ಭಯೋತ್ಪಾದಕರು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಧರ್ಮವನ್ನು ಕೇಳಿ ನಂತರ ಕೊಂದಿದ್ದಾರೆ. ಹಿಂದೂಗಳು ಎಂದಿಗೂ ಇಂತಹ ಕೆಲಸ ಮಾಡುವುದಿಲ್ಲ. ನಾವು ಈಗ ಅವರಿಗೆ ತಕ್ಕ ಪ್ರತ್ಯುತ್ತರ ನೀಡುವುದನ್ನು ಎದುರು ನೋಡುತ್ತಿದ್ದೇವೆ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ಮೂರು ದಿನಗಳ ನಂತರ, ಗುರುವಾರ ಇಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.
‘ನಮ್ಮ ಹೃದಯದಲ್ಲಿ ನೋವಿದೆ. ನಮಗೆ ಸಿಟ್ಟು ಬಂದಿದೆ. ಆದರೆ, ಈಗ ಕೆಟ್ಟದ್ದನ್ನು ನಾಶಮಾಡಲು, ನಾವು ನಮ್ಮ ಶಕ್ತಿ ತೋರಿಸಬೇಕಿದೆ. ರಾವಣನು ತನ್ನ ಮನಸ್ಸನ್ನು ಬದಲಾಯಿಸಲು ನಿರಾಕರಿಸಿದ್ದ. ಆತನಿಗೆ ಸುಧಾರಣೆ ಮಾಡಿಕೊಳ್ಳಲು ಅವಕಾಶ ನೀಡಿದ ನಂತರವೇ ರಾಮನು ಅವನನ್ನು ಸಂಹರಿಸಿದ. ನಮಗೆ ಬೇರೆ ಆಯ್ಕೆ ಇಲ್ಲ, ಇದು ಧರ್ಮ ಮತ್ತು ಅಧರ್ಮದ ನಡುವಿನ ಯುದ್ಧ’ ಎಂದು ಅವರು ಗುಡುಗಿದರು.
‘ದ್ವೇಷ ಮತ್ತು ಹಗೆತನ ನಮ್ಮ ಸ್ವಭಾವದಲ್ಲಿಲ್ಲ. ಆದರೆ, ಮೌನವಾಗಿದ್ದುಕೊಂಡು ಹಾನಿ ಸಹಿಸುವುದಿಲ್ಲ. ನಿಜವಾದ ಅಹಿಂಸಾತ್ಮಕ ವ್ಯಕ್ತಿಯು ಸಹ ಬಲಶಾಲಿಯಾಗಿರಬೇಕು. ಶಕ್ತಿ ಇಲ್ಲದಿದ್ದರೆ, ಯಾವುದೇ ಆಯ್ಕೆಯೂ ಇರುವುದಿಲ್ಲ. ಆದರೆ ಶಕ್ತಿ ಇದ್ದಾಗ, ಅದು ಅಗತ್ಯವಿರುವಾಗ ಗೋಚರವಾಗಬೇಕು’ ಎಂದು ಅವರು ಹೇಳಿದರು.
‘ಇಂತಹ ದುರಂತಗಳನ್ನು ಮತ್ತು ದುಷ್ಟರ ದುರುದ್ದೇಶಗಳನ್ನು ತಡೆಯಲು ಸಮಾಜದೊಳಗೂ ಒಗ್ಗಟ್ಟು ಅತ್ಯಗತ್ಯ. ನಾವು ಒಗ್ಗಟ್ಟಾಗಿದ್ದರೆ, ಯಾರೂ ನಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುವ ಧೈರ್ಯ ಮಾಡುವುದಿಲ್ಲ. ಯಾರಾದರೂ ಹಾಗೆ ಮಾಡಿದರೆ, ಅವರ ಕಣ್ಣುಗಳು ಛಿದ್ರವಾಗುತ್ತವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.