ADVERTISEMENT

ಮಗಳ ಮೇಲೆ ಲೈಂಗಿಕ ದೌರ್ಜನ್ಯ: ಶಿಕ್ಷೆ ಅಮಾನತು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವೈದ್ಯನ ಬಗ್ಗೆ ಕೋರ್ಟ್‌ ಮಾತು

ಪಿಟಿಐ
Published 29 ಮೇ 2025, 14:19 IST
Last Updated 29 ಮೇ 2025, 14:19 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಏಳು ವರ್ಷ ವಯಸ್ಸಿನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಕ್ಕೆ ತನಗೆ ವಿಧಿಸಿರುವ ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಬೇಕು ಎಂದು ಹೃದ್ರೋಗ ತಜ್ಞನೊಬ್ಬ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್‌ ಗುರುವಾರ ನಿರಾಕರಿಸಿದೆ.

ಮದ್ಯಪಾನ ಮಾಡಿದ ನಂತರದಲ್ಲಿ ಮನುಷ್ಯ ಮೃಗದಂತೆ ಆಗುತ್ತಾನೆ ಎಂದು ಕೋರ್ಟ್ ಖೇದ ವ್ಯಕ್ತಪಡಿಸಿದೆ. ವೈದ್ಯನನ್ನು ವಿಚಾರಣಾ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿದೆ, ಆತನಿಗೆ ವಿಧಿಸಿರುವ ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಲಾಗದು ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್‌ ಚಂದ್ರ ಶರ್ಮಾ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.

‘ಈತ ಮಗುವಿನ ಮೇಲೆ ಏನು ಎಸಗಿದ್ದಾನೆ ನೋಡಿ... ನಿಮಗೆ ಸಮಾಧಾನ ಮೂಡಿಸುವಂತಹ ಯಾವುದೇ ಆದೇಶ ಕೊಡಲು ಆಗದು. ಈತನ ವಿರುದ್ಧ ಮಗು ಹೇಳಿಕೆ ನೀಡಿದೆ. ಈತ ವಿಕೃತ ಮನುಷ್ಯ, ಶಿಕ್ಷೆ ಅಮಾನತು ಸಾಧ್ಯವಿಲ್ಲ’ ಎಂದು ಪೀಠವು ಮೌಖಿಕವಾಗಿ ಹೇಳಿತು.

ADVERTISEMENT

‘ನಿನ್ನದೇ ಮಗಳ ಮೇಲೆ ಹೀಗೆ ಮಾಡಬಾರದು... ಬಾಲಕಿಯು ಪಾಟೀಸವಾಲನ್ನು ಎದುರಿಸಿದ್ದಾಳೆ. ಮದ್ಯ ಸೇವಿಸಿದಾಗ ಮನುಷ್ಯ ಮೃಗವಾಗುತ್ತಾನೆ. ನಮ್ಮದು ಅತ್ಯಂತ ಉದಾರಿ ಪೀಠ. ನಾವು ಜಾಮೀನು ನೀಡುತ್ತಿಲ್ಲ ಎಂದಾದರೆ ಅದಕ್ಕೆ ಕಾರಣಗಳಿರುತ್ತವೆ’ ಎಂದು ಕೂಡ ಪೀಠವು ಹೇಳಿತು. ವೈದ್ಯನು ಮದ್ಯಪಾನ ಮಾಡಿ ಲೈಂಗಿಕ ದೌರ್ಜನ್ಯ ನಡೆಸಿದ್ದ.

ವೈದ್ಯನ ಮಗಳು ಯಾರಿಂದಲೋ ಹೇಳಿಸಿಕೊಂಡು ಹೇಳಿಕೆ ನೀಡಿದ್ದಾಳೆ ಎಂದು ಆತನ ಪರವಾಗಿ ಹಾಜರಿದ್ದ ವಕೀಲರು ಪೀಠಕ್ಕೆ ತಿಳಿಸಿದರು. ಅಲಹಾಬಾದ್ ಹೈಕೋರ್ಟ್‌ನಲ್ಲಿ 12 ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ಬಾಕಿ ಇವೆ. ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಶೀಘ್ರ ನಡೆಯುವ ಸಾಧ್ಯತೆ ಇಲ್ಲ ಎಂದು ವಕೀಲರು ಹೇಳಿದರು.

ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸುವುದಕ್ಕೆ ಇದು ಕಾರಣ ಆಗುವುದಿಲ್ಲ ಎಂದು ಪೀಠವು ಹೇಳಿತು. ನಂತರ ವಕೀಲರು ಅರ್ಜಿಯನ್ನು ಹಿಂಪಡೆದರು. ಈ ಕಾರಣಕ್ಕೆ ಅರ್ಜಿಯನ್ನು ವಜಾಗೊಳಿಸಲಾಯಿತು.

ಮಗಳ ಮೇಲೆ ಈತ ಲೈಂಗಿಕ ಹಲ್ಲೆ ನಡೆಸಿದ್ದಾನೆ ಎಂದು ಬಾಲಕಿಯ ತಾಯಿ ದೂರು ನೀಡಿದ್ದರು. ಮಗುವಿನ ತಂದೆ ಮತ್ತು ತಾಯಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. 2018ರ ಮಾರ್ಚ್‌ 23ರಂದು ಮಗಳನ್ನು ಕರೆದುಕೊಂಡು ಹೋಗಿದ್ದ ತಂದೆಯು, ಮಾರ್ಚ್‌ 30ರಂದು ಪತ್ನಿಗೆ ಕರೆ ಮಾಡಿ ಮಗಳನ್ನು ವಾಪಸ್ ಕರೆದೊಯ್ಯುವಂತೆ ಹೇಳಿದ್ದ.

ನಂತರ ಆ ಬಾಲಕಿಯು, ‘ಅಪ್ಪ ಕೆಟ್ಟ ಮನುಷ್ಯ, ಆತ ಕೆಟ್ಟದ್ದಾಗಿ ತನ್ನನ್ನು ಮುಟ್ಟಿದ್ದಾನೆ’ ಎಂದು ತಾಯಿಯ ಬಳಿ ಹೇಳಿದ್ದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.