ADVERTISEMENT

ಮೇಘಾಲಯ ಸಿಎಂ ಮನೆಗೆ ಪೆಟ್ರೋಲ್‌ ಬಾಂಬ್‌: ಗೃಹ ಸಚಿವ ರಾಜೀನಾಮೆ

ಬಂಡುಕೋರನ ಹತ್ಯೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಭಾಗವಾಗಿ ಸಿಎಂ ಮನೆಗೆ ದಾಳಿ| ರಾಜ್ಯದಲ್ಲಿ ಅಶಾಂತಿ ಹಿನ್ನೆಲೆಯಲ್ಲಿ ಪದತ್ಯಾಗ ಮಾಡಿದ ಗೃಹ ಸಚಿವ

ಪಿಟಿಐ
Published 16 ಆಗಸ್ಟ್ 2021, 3:15 IST
Last Updated 16 ಆಗಸ್ಟ್ 2021, 3:15 IST
ಕಾನ್ರಾಡ್ ಕೆ ಸಂಗ್ಮಾ
ಕಾನ್ರಾಡ್ ಕೆ ಸಂಗ್ಮಾ   

ಶಿಲ್ಲಾಂಗ್‌: ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಖಾಸಗಿ ನಿವಾಸಕ್ಕೆ ಭಾನುವಾರ ರಾತ್ರಿ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಇನ್ನೊಂದೆಡೆ, 2018ರಲ್ಲಿ ಶರಣಾಗಿದ್ದ ಬಂಡುಕೋರನಹತ್ಯೆ ಹಿನ್ನೆಲೆಯಲ್ಲಿ ಶಿಲ್ಲಾಂಗ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಗೃಹ ಸಚಿವ ಲಹ್ಕ್‌ಮೆನ್ ರಿಂಬುಯಿ ರಾಜೀನಾಮೆ ನೀಡಿದ್ದಾರೆ.

ಪೆಟ್ರೋಲ್‌ ಬಾಂಬ್‌ ದಾಳಿ ರಾತ್ರಿ 10.15 ರ ಸುಮಾರಿನಲ್ಲಿ ನಡೆದಿದೆ. ವಾಹನಗಳಲ್ಲಿ ಬಂದಿರುವ ದಾಳಿಕೋರರು ಪೆಟ್ರೋಲ್‌ ತುಂಬಿದ್ದ ಎರಡು ಬಾಟಲಿಗಳನ್ನು ಶಿಲ್ಲಾಂಗ್‌ನ ಮೂರನೇ ಮೈಲಿಯಲ್ಲಿರುವ ಸಂಗ್ಮಾ ಅವರ ಖಾಸಗಿ ನಿವಾಸದ ಆವರಣಕ್ಕೆ ಎಸೆದು ಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಮೊದಲ ಬಾಟಲಿಯನ್ನು ಮನೆಯ ಮುಂಭಾಗಕ್ಕೆ ಎಸೆಯಲಾಗಿದ್ದು, ಎರಡನೆ ಬಾಟಲಿಯನ್ನು ಮನೆಯ ಹಿಂಭಾಗದಲ್ಲಿ ಹಾಕಲಾಗಿದೆ. ಸ್ಥಳದಲ್ಲಿದ್ದ ಸಿಬ್ಬಂದಿ ತಕ್ಷಣ ಬೆಂಕಿ ನಂದಿಸಿದ್ದಾರೆ ಎಂದು ‍ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಸ್ವಾತಂತ್ರ್ಯ ದಿನಾಚರಣೆಯಂದು ರಾಜ್ಯ ರಾಜಧಾನಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಘರ್ಷಣೆ, ಬೆಂಕಿ ಹಚ್ಚಿದ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಶಿಲ್ಲಾಂಗ್‌ನಲ್ಲಿ ಕರ್ಫ್ಯೂ ವಿಧಿಸಿದೆ. ಕನಿಷ್ಠ ನಾಲ್ಕು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ನಿರ್ಬಂಧಿಸಿದೆ.

ಗೃಹ ಸಚಿವ ರಾಜೀನಾಮೆ

ನಿಷೇಧಿತ ಸಂಘಟನೆಯ ಮಾಜಿ ಬಂಡುಕೋರನನ್ನುಎನ್‌ಕೌಂಟರ್‌ನಲ್ಲಿ ಕೊಂದ ಹಿನ್ನೆಲೆಯಲ್ಲಿಶಿಲ್ಲಾಂಗ್‌ನಲ್ಲಿ ಹಿಂಸಾಚಾರಗಳು ಸಂಭವಿಸಿವೆ. ಹೀಗಾಗಿ ಮೇಘಾಲಯದ ಗೃಹ ಸಚಿವ ಲಹ್ಕ್‌ಮೆನ್ ರಿಂಬುಯಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ನಿಷೇಧಿತ ‘ಹಿನ್ನೀವ್‌ಟ್ರೆಪ್ ನ್ಯಾಷನಲ್ ಲಿಬರೇಶನ್ ಕೌನ್ಸಿಲ್‌’ನ ಸ್ವಯಂ ಘೋಷಿತ ಪ್ರಧಾನ ಕಾರ್ಯದರ್ಶಿ ಚೆರಿಸ್ಟರ್‌ಫೀಲ್ಡ್ ತಂಗ್‌ಕೀವ್ ಮೇಲಿನ ಗುಂಡಿನ ದಾಳಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ರೈಂಬುಯಿ ಸಿಎಂಗೆ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ನಡೆದ ಸರಣಿ ಐಇಡಿ ಸ್ಫೋಟಗಳಿಗೆ ಸಂಬಂಧಿಸಿದಂತೆ ತಂಗ್‌ಕೀವ್ ಮನೆಯ ಮೇಲೆ ಆಗಸ್ಟ್ 13 ರಂದು ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಆತ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ಮಾಡಲು ಯತ್ನಿಸಿದ್ದ ಎನ್ನಲಾಗಿದೆ. ಹೀಗಾಗಿ ಆತನನ್ನು ಗುಂಡು ಹಾರಿಸಿ ಕೊಲ್ಲಲಾಗಿತ್ತು. 2018 ರಲ್ಲಿ ಆತ ಪೊಲೀಸರಿಗೆ ಶರಣಾಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.