ADVERTISEMENT

ದೂರವಾಣಿ ಕದ್ದಾಲಿಕೆ ಪ್ರಕರಣ; ಎಸ್‌ಐಟಿ ಮುಂದೆ ಹಾಜರಾದ ಸಂತೋಷ್‌

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 14:30 IST
Last Updated 27 ಜನವರಿ 2026, 14:30 IST
ಸಂತೋಷ್‌ ಕುಮಾರ್‌
ಸಂತೋಷ್‌ ಕುಮಾರ್‌   

ಹೈದರಾಬಾದ್‌ (ಪಿಟಿಐ): ತೆಲಂಗಾಣದ ಬಿಆರ್‌ಎಸ್‌ ಸರ್ಕಾರದ ಅವಧಿಯಲ್ಲಿ ದೂರವಾಣಿ ಕದ್ದಾಲಿಕೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಗಾಗಿ ತೆಲಂಗಾಣ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಬಿಆರ್‌ಎಸ್‌ ಪಕ್ಷದ ಮುಖಂಡ, ರಾಜ್ಯಸಭೆಯ ಮಾಜಿ ಸದಸ್ಯ ಜೋಗಿನಪಲ್ಲಿ ಸಂತೋಷ್‌ ಕುಮಾರ್‌ ಮಂಗಳವಾರ ಹಾಜರಾದರು.

ಸಂತೋಷ್‌ ಅವರು ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರ ಸಂಬಂಧಿ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಹಾಜರಾಗುವಂತೆ ಎಸ್‌ಐಟಿಯು ಸೋಮವಾರ ನೋಟಿಸ್‌ ಜಾರಿಗೊಳಿಸಿತ್ತು. ಈ ಕಾರಣದಿಂದ ತನಿಖಾಧಿಕಾರಿ ಮುಂದೆ ಮಂಗಳವಾರ ಹಾಜರಾದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಜನವರಿ 20 ಹಾಗೂ 23ರಂದು ಬಿಆರ್‌ಎಸ್‌ನ ಕಾರ್ಯಕಾರಿ ಅಧ್ಯಕ್ಷ ಕೆ.ಟಿ.ರಾಮರಾವ್‌, ಬಿಆರ್‌ಎಸ್‌ನ ಹಿರಿಯ ಶಾಸಕ ಟಿ. ಹರೀಶ್‌ ರಾವ್‌ ಕೂಡ ಎಸ್‌ಐಟಿ ಮುಂದೆ ಹಾಜರಾಗಿದ್ದರು. 

ADVERTISEMENT

ಬಿಆರ್‌ಎಸ್‌ ಸರ್ಕಾರದ ಅವಧಿಯಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಪತ್ರಕರ್ತರು ಹಾಗೂ ಗಣ್ಯ ವ್ಯಕ್ತಿಗಳ ದೂರವಾಣಿ ಕದ್ದಾಲಿಕೆ ಮಾಡಿದ ಆರೋಪ ಕೇಳಿಬಂದಿತ್ತು. ಇದರಲ್ಲಿ ತೆಲಂಗಾಣ ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥ ಟಿ. ಪ್ರಭಾಕರ್‌ ರಾವ್‌ ಅವರನ್ನು ಮುಖ್ಯ ಆರೋಪಿ ಎಂದು ಹೇಳಲಾಗಿದ್ದು, ಅವರನ್ನು ಈ ಹಿಂದೆ ವಿಚಾರಣೆಗೊಳಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.