
ತೆಲಂಗಾಣದ ವಿಶೇಷ ಗುಪ್ತಚರ ಬ್ಯೂರೊದ ಮಾಜಿ ಮುಖ್ಯಸ್ಥ ಟಿ.ಪ್ರಭಾಕರ ರಾವ್ (ಬಲ)
ಹೈದರಾಬಾದ್: ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ವಿಶೇಷ ಗುಪ್ತಚರ ಬ್ಯೂರೊದ (ಎಸ್‌ಐಬಿ) ಮಾಜಿ ಮುಖ್ಯಸ್ಥ ಟಿ.ಪ್ರಭಾಕರ ರಾವ್, ಇಲ್ಲಿನ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ತನಿಖಾಧಿಕಾರಿ ಮುಂದೆ ಶುಕ್ರವಾರ ಶರಣಾದರು.
ಡಿ.12ರಂದು ಬೆಳಿಗ್ಗೆ 11ಗಂಟೆಯೊಳಗೆ ಪೊಲೀಸರ ಮುಂದೆ ಶರಣಾಗುವಂತೆ ರಾವ್ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶಿಸಿತ್ತು. ರಾವ್ ವಿರುದ್ಧ, ‘ಎಸ್‌ಐಬಿ’ಯನ್ನು ರಾಜಕೀಯ ಉದ್ದೇಶಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ.
ಹಿಂದಿನ ಬಿಆರ್‌ಎಸ್ ಸರ್ಕಾರದ ಅವಧಿಯಲ್ಲಿ ಫೋನ್ ಕದ್ದಾಲಿಕೆ ಮತ್ತು ವಿವಿಧ ಎಲೆಕ್ಟ್ರಾನಿಕ್ಸ್ ಗ್ಯಾಜೆಟ್‌ಗಳಿಂದ ಮಾಹಿತಿ ಅಳಿಸಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಬಿಯ ಮಾಜಿ ಮುಖ್ಯಸ್ಥ ಸೇರಿ ನಾಲ್ವರು ಅಧಿಕಾರಿಗಳನ್ನು ಹೈದರಾಬಾದ್ ಪೊಲೀಸರು 2024ರ ಮಾರ್ಚ್‌ನಲ್ಲಿ ಬಂಧಿಸಿದ್ದರು. ನಂತರ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ರಕ್ಷಣೆ ನೀಡಿತ್ತು. ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ತೆಲಂಗಾಣ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ರಾವ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಗುರುವಾರ ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಹಾಗೂ ಆರ್.ಮಹದೇವನ್ ಅವರ ಪೀಠವು, ‘ರಾವ್ ವಿರುದ್ಧದ ಆರೋಪಗಳ ಕುರಿತು ಹೆಚ್ಚಿನ ತನಿಖೆ ಅಗತ್ಯ ಇದೆ. ಹೀಗಾಗಿ, ಈ ಆದೇಶ ಹೊರಡಿಸಲಾಗಿದೆ. ಕಾಯ್ದೆ ಅನುಸಾರವೇ ಅವರನ್ನು ವಿಚಾರಣೆಗೆ ಒಳಪಡಿಸಬೇಕು’ ಎಂದು ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.