ADVERTISEMENT

ತೆಲಂಗಾಣ ಫೋನ್‌ ಕದ್ದಾಲಿಕೆ: SIB ಮಾಜಿ ಮುಖ್ಯಸ್ಥ ಟಿ.ಪ್ರಭಾಕರಗೆ ಸಂಕಷ್ಟ

ತೆಲಂಗಾಣ: ಫೋನ್‌ ಕದ್ದಾಲಿಕೆ ಪ್ರಕರಣ * ಬೆಳಿಗ್ಗೆ 11ರ ಗಡುವು

ಪಿಟಿಐ
Published 11 ಡಿಸೆಂಬರ್ 2025, 13:54 IST
Last Updated 11 ಡಿಸೆಂಬರ್ 2025, 13:54 IST
   

ನವದೆಹಲಿ: ತೆಲಂಗಾಣದಲ್ಲಿ ಭಾರಿ ಸದ್ದು ಮಾಡಿರುವ ಫೋನ್‌ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿ, ಇದೇ ಶುಕ್ರವಾರ (ಡಿ.12) ಬೆಳಿಗ್ಗೆ 11ರೊಳಗೆ ಪೊಲೀಸರ ಮುಂದೆ ಶರಣಾಗುವಂತೆ ವಿಶೇಷ ಗುಪ್ತಚರ ಬ್ಯುರೊ(ಎಸ್‌ಐಬಿ) ಮಾಜಿ ಮುಖ್ಯಸ್ಥ ಟಿ.ಪ್ರಭಾಕರ ರಾವ್ ಅವರಿಗೆ ಸುಪ್ರೀಂ ಕೋರ್ಟ್‌ ಗುರುವಾರ ನಿರ್ದೇಶಿಸಿದೆ.

‘ಜುಬಿಲಿ ಹಿಲ್ಸ್‌ ಪೊಲೀಸ್‌ ಠಾಣೆಯಲ್ಲಿ, ತನಿಖಾಧಿಕಾರಿ ಮುಂದೆ ಶುಕ್ರವಾರ ಬೆಳಿಗ್ಗೆ 11ರ ಹೊತ್ತಿಗೆ ಅರ್ಜಿದಾರ (ಟಿ.ಪ್ರಭಾಕರ ರಾವ್) ಶರಣಾಗಬೇಕು. ಕಾಯ್ದೆ ಅನುಸಾರವೇ ಅವರನ್ನು ವಿಚಾರಣೆಗೆ ಒಳಪಡಿಸಬೇಕು’ ಎಂದು ಹೇಳಿದ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಹಾಗೂ ಆರ್‌.ಮಹದೇವನ್‌ ಅವರು ಇದ್ದ ಪೀಠ, ವಿಚಾರಣೆಯನ್ನು ಡಿಸೆಂಬರ್ 12ಕ್ಕೆ ಮುಂದೂಡಿತು.

‘ರಾವ್ ಎಸಗಿದ್ದಾರೆ ಎನ್ನಲಾದ ಅಪರಾಧಗಳ ಕುರಿತು ಹೆಚ್ಚಿನ ತನಿಖೆ ಅಗತ್ಯ ಇದೆ. ಹೀಗಾಗಿ, ಈ ಆದೇಶ ಹೊರಡಿಸಲಾಗಿದೆ’ ಎಂದು ಪೀಠ ಹೇಳಿದೆ.

ADVERTISEMENT

ಈ ಹಿಂದಿನ ಬಿಆರ್‌ಎಸ್‌ ನೇತೃತ್ವದ ಸರ್ಕಾರದ ಅವಧಿಯಲ್ಲಿ, ಫೋನ್‌ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಜೊತೆಗೆ, ಹಲವಾರು ಎಲೆಕ್ಟ್ರಾನಿಕ್‌ ಸಾಧನಗಳಲ್ಲಿನ ಗುಪ್ತಚರ ಮಾಹಿತಿಯನ್ನು ಅಳಿಸಿ ಹಾಕಲಾಗಿದೆ ಎಂಬ ಆರೋಪದಡಿ, ಎಸ್‌ಐಬಿಯ ಡಿಎಸ್‌ಪಿ ಆಗಿದ್ದ ಪ್ರಭಾಕರ ರಾವ್‌ ಸೇರಿ ನಾಲ್ವರನ್ನು ಹೈದರಾಬಾದ್‌ ಪೊಲೀಸರು ಕಳೆದ ವರ್ಷ ಮಾರ್ಚ್‌ನಲ್ಲಿ ಬಂಧಿಸಿದ್ದರು. 

ರಾವ್‌ ಅವರಿಗೆ ಮಧ್ಯಂತರ ರಕ್ಷಣೆ ನೀಡಿ, ಸುಪ್ರೀಂ ಕೋರ್ಟ್‌ ಮೇ 29ರಂದು ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.