ADVERTISEMENT

6 ಎಕರೆ ಪ್ರದೇಶದಲ್ಲಿತ್ತು ಉಗ್ರರ ತರಬೇತಿ ಶಿಬಿರ; 600 ಮಂದಿ ವಾಸ್ತವ್ಯಕ್ಕೆ ಅವಕಾಶ

ಏಜೆನ್ಸೀಸ್
Published 26 ಫೆಬ್ರುವರಿ 2019, 15:03 IST
Last Updated 26 ಫೆಬ್ರುವರಿ 2019, 15:03 IST
ಭಾರತೀಯ ವಾಯುಪಡೆ ಬಾಲಾಕೋಟ್‌ ಪ್ರದೇಶದಲ್ಲಿ ನಡೆಸಿದ ದಾಳಿಯಿಂದ ಉರುಳಿರುವ ಮರಗಳು; ಪಾಕಿಸ್ತಾನದ ಐಎಸ್‌ಪಿಆರ್‌ ಫೋಟೊ ಬಿಡುಗಡೆ ಮಾಡಿದೆ– ಚಿತ್ರ: ಎಎಫ್‌ಪಿ
ಭಾರತೀಯ ವಾಯುಪಡೆ ಬಾಲಾಕೋಟ್‌ ಪ್ರದೇಶದಲ್ಲಿ ನಡೆಸಿದ ದಾಳಿಯಿಂದ ಉರುಳಿರುವ ಮರಗಳು; ಪಾಕಿಸ್ತಾನದ ಐಎಸ್‌ಪಿಆರ್‌ ಫೋಟೊ ಬಿಡುಗಡೆ ಮಾಡಿದೆ– ಚಿತ್ರ: ಎಎಫ್‌ಪಿ   

ನವದೆಹಲಿ:ಗಡಿ ನಿಯಂತ್ರಣ ರೇಖೆಯ ಸಮೀಪದ ಬಾಲಾಕೋಟ್‌ನ ಸುಮಾರು 6 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದ ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆಯ ತರಬೇತಿ ಶಿಬಿರದ ಮೇಲೆ ಭಾರತೀಯ ವಾಯು ಪಡೆ ದಾಳಿ ನಡೆಸಿದೆ. ಈ ಶಿಬಿರವು ದೊಡ್ಡ ಸಭಾಂಗಣಗಳು, ಮಲಗುವ ಕೋಣೆಗಳನ್ನು ಒಳಗೊಂಡಿತ್ತು ಹಾಗೂ ಸುಮಾರು 600 ಜನರಿಗೆ ವಾಸ್ತವ್ಯ ಕಲ್ಪಿಸುವ ಅನುಕೂಲ ಒಳಗೊಂಡಿತ್ತು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದಿಂದ ಸುಮಾರು 80 ಕಿ.ಮೀ. ದೂರದಲ್ಲಿ ಉಗ್ರರ ಶಿಬಿರವಿತ್ತು. ಶಿಬಿರದ ಫೋಟೊಗಳು ಸರ್ಕಾರದ ಮೂಲಗಳಿಂದ ಬಿಡುಗಡೆಯಾಗಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಶೂಟಿಂಗ್‌ ಅಭ್ಯಾಸಕ್ಕಾಗಿ ಫೈರಿಂಗ್‌ ರೇಂಜ್‌, ಈಜುಕೊಳ ಹಾಗೂ ಜಿಮ್‌ ಸೌಲಭ್ಯಗಳನ್ನೂ ಶಿಬಿರ ಒಳಗೊಂಡಿರುವುದು ಫೋಟೊಗಳಿಂದ ತಿಳಿದು ಬಂದಿದೆ. ಗುಡ್ಡದ ಮೇಲಿನ ಶಿಬಿರಕ್ಕೆ ಸುತ್ತುವರಿದಿರುವ ದಟ್ಟ ಅರಣ್ಯ ರಕ್ಷಾ ಕವಚವಾಗಿತ್ತು.

ಈ ತರಬೇತಿ ಶಿಬಿರ ನಿರ್ಮಿಸುವ ಕಾರ್ಯವನ್ನು 2003–04ರಲ್ಲಿ ಪ್ರಾರಂಭಿಸಲಾಗಿತ್ತು. ರಷ್ಯಾ ಸೇನಾ ಪಡೆಯೊಂದಿಗೆ ಹೋರಾಡಿದ ಅಫ್ಘನಿಸ್ತಾನದ ಸಮರ ವೀರರನ್ನು ಪಾಕಿಸ್ತಾನದ ಯುವಕರಿಗೆ ಮಿಲಿಟರಿ ತರಬೇತಿ ನೀಡಲು ನೇಮಿಸಲಾಗಿತ್ತು.

ADVERTISEMENT

ಜೈಷ್‌–ಎ–ಮೊಹಮ್ಮದ್‌ ಉಗ್ರರರು ತರಬೇತಿ ಪಡೆಯುತ್ತಿದ್ದ ಮುಖ್ಯ ಸಭಾಂಗಣದಲ್ಲಿ ಉಗ್ರ ಸಂಘಟನೆಯ ಬಾವುಟಗಳು ಹಾಗೂ ಬ್ಯಾನರ್‌ಗಳಿಂದ ಅಲಂಕರಿಸಲಾಗಿತ್ತು.

ಇದೇ ಸಭಾಂಗಣದಲ್ಲಿ ತರಬೇತಿ ಪಡೆದು ಮುಂದಿನ ಕಾರ್ಯಾಚರಣೆಗೆ ಅಣಿಯಾಗುತ್ತಿದ್ದ ಉಗ್ರರ ಪಡೆಯ ವಾರ್ಷಿಕ ಪರೇಡ್‌ 2018ರ ಏಪ್ರಿಲ್‌ 1ರಂದು ನಡೆದಿತ್ತು. ಈ ಸಮಾರಂಭದಲ್ಲಿ ಉಗ್ರ ಸಂಘಟನೆಯ ಪ್ರಮುಖ ಮುಫ್ತಿ ಅಬ್ದುಲ್‌ ರೌಫ್‌ ಅಸ್ಘಾರ್‌ ಮತ್ತು ಅವನ ಸಹೋದರ ಮೌಲಾನಾ ಮಸೂದ್‌ ಅಝಾರ್‌ ಭಾಗಿಯಾಗಿದ್ದರು.

ಉಗ್ರರ ಪಡೆಯಲ್ಲಿ ಶತ್ರು ರಾಷ್ಟ್ರಗಳ ವಿರುದ್ಧ ಹಗೆ ಮೂಡಿಸುವ ಸಲುವಾಗಿ ಮಹಡಿಗೆ ಅಮೆರಿಕ, ಇಂಗ್ಲೆಂಡ್‌ ಹಾಗೂ ಇಸ್ರೇಲ್‌ ರಾಷ್ಟ್ರಗಳ ಬಾವುಟಗಳ ಪೇಂಟಿಂಗ್‌ ಮಾಡಲಾಗಿರುವುದನ್ನು ಕಾಣಬಹುದಾಗಿದೆ.

ಪಾಕಿಸ್ತಾನದ ಗುಪ್ತಚರ ಇಲಾಖೆ ಇಂಟರ್‌–ಸರ್ವಿಸಸ್‌ ಇಂಟೆಲಿಜೆನ್ಸ್‌(ಐಎಸ್‌ಐ)ನ ನೇರ ನಿರ್ವಹಣೆ ಹಾಗೂ ರಕ್ಷಣೆಯಲ್ಲಿ ಉಗ್ರರರಿಗೆ ತರಬೇತಿ ನೀಡುವ ಶಿಬಿರವನ್ನು ನಡೆಸಲಾಗುತ್ತಿತ್ತು. ಇಲ್ಲಿ 250ಕ್ಕೂ ಹೆಚ್ಚು ಉಗ್ರರರಿಗೆ ತರಬೇತಿ ನೀಡಲಾಗುತ್ತಿತ್ತು.

ಶಸ್ತ್ರಾಸ್ತ್ರಗಳನ್ನು ಪ್ರತ್ಯೇಕ ಕೋಣೆಯಲ್ಲಿ ಸಂಗ್ರಹಿಸಿಡಲಾಗಿತ್ತು. ಅಲ್ಲಿ ಸಾಕಷ್ಟು ಎಕೆ 200 ರೈಫಲ್‌ಗಳು, ಹ್ಯಾಂಡ್‌ ಗ್ರೆನೇಡ್‌ಗಳು ಹಾಗೂ ಇತರೆ ಸ್ಫೋಟಕ ಸಾಮಗ್ರಿಗಳನ್ನು ಸಂಗ್ರಹಿಸಲಾಗಿತ್ತು.

ಈ ಶಿಬಿರವನ್ನು ಜೈಷ್‌ ಎ–ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಝರ್‌ನ ಭಾವ ಉಸ್ತಾದ್‌ ಘೌರಿ ಅಥವಾ ಮೌಲಾನಾ ಯುಸೌಫ್‌ ಅಝರ್‌ ಮುನ್ನಡೆಸುತ್ತಿದ್ದ. ಇವತ್ತಿನ ವೈಮಾನಿಕ ದಾಳಿಯಲ್ಲಿ ಆತನೂ ಸಹ ಬಲಿಯಾಗಿದ್ದಾನೆ. ಸಂಚಾರಕ್ಕೆ ಮೌಲಾನಾ ಯುಸೌಫ್‌ ಅಝರ್‌ ಬಳಸುತ್ತಿದ್ದ ಎಸ್‌ಯುವಿಯನ್ನೂ ಇಲ್ಲಿ ಕಾಣಬಹುದು.

ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆ, ಸ್ಫೋಟಗಳ ಬಳಕೆ ಹಾಗೂ ದಾಳಿ ಮಾಡುವ ಸಂದರ್ಭದಲ್ಲಿ ಅನುಸರಿಸಬಹುದಾದ ತಂತ್ರಗಳು, ದಾಳಿಗೆ ಯೋಜನೆ ರೂಪಿಸುವುದು, ಸುಧಾರಿತ ಸ್ಫೋಟಕ ಸಾಮಗ್ರಿ(ಐಇಡಿ) ಸಿದ್ಧಪಡಿಸುವುದು ಹಾಗೂ ಅವುಗಳನ್ನು ಅಡಗಿಸುವುದು, ಆತ್ಮಾಹುತಿ ಬಾಂಬ್‌ ದಾಳಿ ಸಿದ್ಧತೆ, ಆತ್ಮಾಹುತಿ ದಾಳಿಗೆ ವಾಹನಗಳನ್ನು ಅಣಿಗೊಳಿಸುವುದು, ಎತ್ತರ ಪ್ರದೇಶಗಳಲ್ಲಿ ಜೀವಿಸುವುದು ಹಾಗೂ ಅತ್ಯಂತ ಒತ್ತಡದ ಸಂದರ್ಭಗಳನ್ನು ಎದುರಿಸುವುದರ ತರಬೇತಿಗಳನ್ನು ಉಗ್ರರಿಗೆ ಈ ಶಿಬಿರದಲ್ಲಿ ನೀಡಲಾಗುತ್ತಿತ್ತು.

ಕುನ್ಹಾರ್‌ ನದಿಯ ಸಮೀಪದಲ್ಲಿಯೇ ಶಿಬಿರವಿದ್ದ ಕಾರಣ, ಈಜುವುದು ಸೇರಿದಂತೆ ನೀರಿನಲ್ಲಿ ಇಳಿದು ಸಾಗುವ ತರಬೇತಿಯನ್ನೂ ಉಗ್ರರಿಗೆ ನೀಡಿರುವ ಸಾಧ್ಯತೆಗಳಿವೆ.

ಪುಲ್ವಾಮಾ ದಾಳಿಯ ಬಳಿಕ ಉಗ್ರರು ಮತ್ತಷ್ಟು ದಾಳಿ ನಡೆಸಲು ಸಜ್ಜಾಗಿರುವ ಬಗ್ಗೆ ಗುಪ್ತಚರ ಮಾಹಿತಿ ಇದ್ದುದರಿಂದ ಭಾರತೀಯ ವಾಯುಪಡೆ ದಾಳಿ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.