ADVERTISEMENT

ವಿಮಾನ ದುರಂತ- ಪೈಲಟ್ ದಕ್ಷತೆಯಿಂದ ಬದುಕುಳಿದೆ: ಸಿ.ಎಂ ಮಮತಾ ಬ್ಯಾನರ್ಜಿ

ಸಂಭವಿಸಬಹುದಾಗಿದ್ದ ವಿಮಾನ ದರುಂತ ವಿವರಿಸಿದ ದೀದಿ

ಪಿಟಿಐ
Published 7 ಮಾರ್ಚ್ 2022, 17:01 IST
Last Updated 7 ಮಾರ್ಚ್ 2022, 17:01 IST
ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ 
ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ    

ಕೋಲ್ಕತಾ: ತಾವು ಪ್ರಯಾಣಿಸುತ್ತಿದ್ದ ವಿಮಾನ ಆಕಾಶದ ಮಧ್ಯೆ ಹಾರಾಡುತ್ತಿದ್ದಾಗ ಮತ್ತೊಂದು ವಿಮಾನವು ಡಿಕ್ಕಿಯಾಗುವಷ್ಟು ಹತ್ತಿರಕ್ಕೆ ಬಂದಿತ್ತು. ಆದರೆ ನಮ್ಮ ವಿಮಾನದ ಪೈಲಟ್ ಅವರ ಸಮಯಪ್ರಜ್ಞೆಯಿಂದ ಈ ದುರಂತ ತಪ್ಪಿತು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.

ಈ ಘಟನೆಯಲ್ಲಿ ಮಮತಾ ಬ್ಯಾನರ್ಜಿ ಅವರ ಬೆನ್ನು ಮತ್ತು ಎದೆಗೆ ಗಾಯವಾಗಿದ್ದು, ಈ ಕುರಿತು ವರದಿ ಸಲ್ಲಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ)ಕ್ಕೆ ಪಶ್ಚಿಮ ಬಂಗಾಳ ಸರ್ಕಾರ ಸೂಚಿಸಿದೆ. ಅಲ್ಲದೆ ಮಮತಾ ಅವರ ಚಾರ್ಟರ್ಡ್ ವಿಮಾನ ಹಾರಾಟಕ್ಕೆ ಅನುಮೋದನೆ ನೀಡಲಾಗಿತ್ತೇ ಎಂಬ ಬಗ್ಗೆ ಮಾಹಿತಿ ನೀಡುವಂತೆಯೂ ಡಿಜಿಸಿಎಗೆ ಸೂಚಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಪರ ಪ್ರಚಾರ ನಡೆಸಿ ವಾಪಸ್ ಬಂಗಾಳಕ್ಕೆ ತೆರಳುವ ವೇಳೆ ಈ ಘಟನೆ ಸಂಭವಿಸಿದೆ.

'ನಾನು ಪ್ರಯಾಣಿಸುತ್ತಿದ್ದ ವಿಮಾನದ ಎದುರಿಗೆ ಇದ್ದಕ್ಕಿದ್ದ ಹಾಗೆಯೇ ಮತ್ತೊಂದು ವಿಮಾನ ನುಗ್ಗಿ ಬಂದಿತು. ಈ ಪರಿಸ್ಥಿತಿ ಮತ್ತೊಂದು 10 ಸೆಕೆಂಡ್‌ಗಳ ಕಾಲ ಮುಂದುವರಿದಿದ್ದರೆ, ಎರಡೂ ವಿಮಾನಗಳ ಮಧ್ಯೆ ಡಿಕ್ಕಿ ಸಂಭವಿಸುತ್ತಿತ್ತು. ಆದರೆ ಪೈಲಟ್ ಅವರ ದಕ್ಷತೆಯಿಂದಾಗಿ ನಾನು ಬದುಕುಳಿದಿದ್ದೇನೆ. ಈ ವೇಳೆ ವಿಮಾನವು 6000 ಅಡಿಯಷ್ಟು ಕೆಳಕ್ಕೆ ಇಳಿಯಿತು. ಹೀಗಾಗಿ ಬೆನ್ನು ಮತ್ತು ಎದೆಗೆ ಗಾಯವಾಗಿದೆ. ಈ ನೋವು ಇನ್ನೂ ಇದೆ' ಎಂದು ಶುಕ್ರವಾರ ನಡೆದ ಘಟನೆ ಬಗ್ಗೆ ಬ್ಯಾನರ್ಜಿ ಅವರು ವಿವರಣೆ ನೀಡಿದರು.

ADVERTISEMENT

ಅಂದು ಬ್ಯಾನರ್ಜಿ ಅವರು 10.3 ಟನ್‌ನಷ್ಟು ತೂಕವಿರುವ ಗರಿಷ್ಠ 10 ಮಂದಿಯನ್ನು ಹೊತ್ತೊಯ್ಯುವ ಸಾಮರ್ಥ್ಯದ ಡಸಾಲ್ಟ್ 2000 ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.