ADVERTISEMENT

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಿಗೆ ಅತ್ಯಲ್ಪ ಪಿಂಚಣಿ: ಶೋಚನೀಯ ಎಂದ SC

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನಿವೃತ್ತಿ ವೇತನ ಕುರಿತು ವಿಷಾದ

ಪಿಟಿಐ
Published 18 ಡಿಸೆಂಬರ್ 2024, 12:26 IST
Last Updated 18 ಡಿಸೆಂಬರ್ 2024, 12:26 IST
–
   

ನವದೆಹಲಿ: ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಿಗೆ ₹10 ಸಾವಿರದಿಂದ ₹15 ಸಾವಿರದಷ್ಟು ಅತ್ಯಲ್ಪ ನಿವೃತ್ತಿ ವೇತನ ನೀಡಲಾಗುತ್ತಿದೆ. ಇದು ಶೋಚನೀಯ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.

‘ನಿವೃತ್ತಿ ವೇತನ ನೀಡುವುದಕ್ಕೆ ಸಂಬಂಧಿಸಿ ಮಾನವೀಯತೆ ದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕೇ ಹೊರತು ಕಾನೂನಾತ್ಮಕ ವಿಧಾನಕ್ಕೆ ಜೋತು ಬೀಳಬಾರದು’ ಎಂದು ಸಂಬಂಧಪಟ್ಟ ಅಧಿಕಾರಿಗಳನ್ನು ಉದ್ದೇಶಿಸಿ ಹೇಳಿದೆ.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಿಗೆ ನೀಡಲಾಗುತ್ತಿರುವ ಪಿಂಚಣಿಯಲ್ಲಿ ವ್ಯತ್ಯಾಸವಿದೆ ಎಂಬ ಕುರಿತು ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಹಾಗೂ ಕೆ.ವಿ.ವಿಶ್ವನಾಥನ್ ಅವರು ಇದ್ದ ನ್ಯಾಯಪೀಠ ನಡೆಸಿತು.

ADVERTISEMENT

‘ಜಿಲ್ಲಾ ನ್ಯಾಯಾಲಯಗಳಿಂದ ಪದೋನ್ನತಿ ಹೊಂದಿ ಹೈಕೋರ್ಟ್‌ ನ್ಯಾಯಮೂರ್ತಿಗಳಾದವರನ್ನು ಹೊಸ ಪಿಂಚಣಿ ಯೋಜನೆ ವ್ಯಾಪ್ತಿಗೆ ಸೇರಿಸಿರುವುದೇ ಈ ಅತ್ಯಲ್ಪ ಪಿಂಚಣಿಗೆ ಕಾರಣಗಳಲ್ಲೊಂದು.

ಇನ್ನೊಂದೆಡೆ, ಹೈಕೋರ್ಟ್‌ಗೆ ನೇಮಕಗೊಂಡಿರುವ ಹಿರಿಯ ವಕೀಲರಿಗೆ ಹಳೆಯ ಪಿಂಚಣಿ ಯೋಜನೆಯ ಪ್ರಯೋಜನ ಸಿಗುತ್ತಿದೆ. ಇದು ಪಿಂಚಣಿಯಲ್ಲಿನ ವ್ಯತ್ಯಾಸಕ್ಕೆ ಮತ್ತೊಂದು ಕಾರಣ.

ಕೇಂದ್ರದ ಪರ ಹಾಜರಿದ್ದ ಅಟಾರ್ನಿ ಜನರಲ್ ಆರ್‌.ವೆಂಕಟರಮಣಿ, ‘ಈ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ಯತ್ನಿಸಲಿದೆ. ಈ ಕುರಿತ ಅರ್ಜಿಗಳ ವಿಚಾರಣೆಯನ್ನು ಜನವರಿಗೆ ಮುಂದೂಡಬೇಕು’ ಎಂದು ಪೀಠಕ್ಕೆ ಮನವಿ ಮಾಡಿದರು.

‘ಈ ವಿಷಯ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿ ಕೊಡಿ. ಇದರಿಂದ ನಾವು ಈ ವಿಷಯದಲ್ಲಿ ಮಧ್ಯಪ್ರವೇಶಿಸುವುದು ತಪ್ಪಲಿದೆ’ ಎಂದ ಪೀಠ, ವಿಚಾರಣೆಯನ್ನು ಜನವರಿ 8ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.