ADVERTISEMENT

ಆಗಸ್ಟ್‌ 15ರ ನಂತರ ಶಾಲಾ–ಕಾಲೇಜು ಆರಂಭ: ಸಚಿವ ಪೋಕ್ರಿಯಾಲ್‌

ಏಜೆನ್ಸೀಸ್
Published 8 ಜೂನ್ 2020, 19:30 IST
Last Updated 8 ಜೂನ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ಶಾಲೆಗಳ ಆರಂಭ ಕುರಿತು ಏರ್ಪಟ್ಟಿರುವ ಗೊಂದಲಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ತೆರೆ ಎಳೆದಿದೆ. ಆಗಸ್ಟ್‌ 15ರ ನಂತರವೇ ಶಾಲಾ– ಕಾಲೇಜುಗಳು ಪುನರಾರಂಭವಾಗಲಿವೆ ಎಂದು ಸಚಿವ ರಮೇಶ್‌ ಪೋಕ್ರಿಯಾಲ್‌ ನಿಶಾಂಕ್‌ ಸ್ಪಷ್ಟಪಡಿಸಿದ್ದಾರೆ.

‘ಬಿಬಿಸಿ’ ನ್ಯೂಸ್‌ ಹಿಂದಿಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಸ್ಪಷ್ಟಪಡಿಸಿರುವ ಸಚಿವರು, ಕೆಲವು ಪರೀಕ್ಷೆಗಳು ಬಾಕಿ ಉಳಿದಿದ್ದು, ಅವುಗಳನ್ನು ಜುಲೈ 15 ರೊಳಗೆ ನಡೆಸಿ, ಫಲಿತಾಂಶವನ್ನು ಆಗಸ್ಟ್‌ 15 ರೊಳಗೆ ಪ್ರಕಟಿಸಲಾಗುವುದು. ಅದರ ನಂತರವೇ ಶಾಲೆಗಳನ್ನು ತೆರೆಯಲಾಗುವುದು ಎಂದು ಹೇಳಿದ್ದಾರೆ.

ಕೋವಿಡ್‌–19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಘೋಷಣೆ ಮೇರೆಗೆ ದೇಶದಲ್ಲಿ ಮಾರ್ಚ್‌ 16 ರಿಂದ ಎಲ್ಲ ಶಾಲೆ, ವಿಶ್ವವಿದ್ಯಾಲಯಗಳನ್ನು ಬಂದ್‌ ಮಾಡಲಾಗಿದೆ. ಕೇಂದ್ರ ಸರ್ಕಾರವು ಕೆಲವು ನಿರ್ಬಂಧನೆಗಳನ್ನು ಸಡಿಲಗೊಳಿಸಿದ್ದರೂ ಶಾಲಾ– ಕಾಲೇಜುಗಳನ್ನು ಆರಂಭಿಸಲು ಅನುಮತಿ ನೀಡಿಲ್ಲ.

ADVERTISEMENT

ಶಾಲಾ–ಕಾಲೇಜುಗಳು, ಶೈಕ್ಷಣಿಕ ಸಂಸ್ಥೆಗಳು, ತರಬೇತಿ ಸಂಸ್ಥೆಗಳನ್ನು ಪುನರಾರಂಭಿಸುವ ನಿರ್ಧಾರವನ್ನು ಜುಲೈ ತಿಂಗಳಲ್ಲಿ ತೆಗೆದುಕೊಳ್ಳಲಾಗುವುದು ಮತ್ತು ಎಸ್‌ಒಪಿ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯಮೇ 30 ರಂದೇ ಹೇಳಿದೆ.

ಮುಂದಿನ ಶೈಕ್ಷಣಿಕ ವರ್ಷಕ್ಕಾಗಿ ಸಿಬಿಎಸ್‌ಇ ಪಠ್ಯಕ್ರಮವನ್ನು ಕಡಿಮೆಗೊಳಿಸಲಿದೆ. ಲಾಕ್‌ಡೌನ್‌ ಕಾರಣ ಈ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪೋಕ್ರಿಯಾಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.