ADVERTISEMENT

ಹಿಂಸಾಚಾರಕ್ಕೆ ಕರೆ ಆರೋಪ: ದ್ವೇಷ ಭಾಷಣಗಳ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಪಿಟಿಐ
Published 8 ಆಗಸ್ಟ್ 2023, 15:29 IST
Last Updated 8 ಆಗಸ್ಟ್ 2023, 15:29 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಹರಿಯಾಣ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ಈಚೆಗೆ ನಡೆದ ರ‍್ಯಾಲಿಗಳಲ್ಲಿ ‘ನಿರ್ಲಜ್ಜವಾಗಿ ದ್ವೇಷ ಭಾಷಣ’ಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಮುಸ್ಲಿಮರನ್ನು ಕೊಲ್ಲಲು ಮತ್ತು ಅವರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಬಹಿಷ್ಕರಿಸುವಂತೆ ಕರೆ ನೀಡಲಾಗುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಶಾಹೀನ್‌ ಅಬ್ದುಲ್ಲಾ ಎಂಬ ಪತ್ರಕರ್ತೆ ಸಲ್ಲಿಸಿರುವ ಈ ಅರ್ಜಿಯನ್ನು ವಿಚಾರಣೆಗಾಗಿ ಮಂಗಳವಾರ ಪಟ್ಟಿ ಮಾಡಲಾಗಿತ್ತು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ವಿಧಿ 370ನ್ನು ರದ್ದುಪಡಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠದ ಎದುರು ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ದ್ವೇಷ ಭಾಷಣಕ್ಕೆ ಸಂಬಂಧಿಸಿದ ಈ ಅರ್ಜಿ ಕುರಿತು ಪ್ರಸ್ತಾಪಿಸಿದರು.

ADVERTISEMENT

ಗುರುಗ್ರಾಮದಲ್ಲಿಯ ಸದ್ಯದ ಬೆಳವಣಿಗೆಯು ಆತಂಕಕಾರಿಯಾಗಿದೆ. ಮುಸ್ಲಿಮರಿಗೆ ಉದ್ಯೋಗ ನೀಡುವವರನ್ನು ‘ದ್ರೋಹಿ’ಗಳು ಎಂದು ಕರೆಯುವಂತೆ ಕರೆ ನೀಡಲಾಗುತ್ತಿದೆ ಎಂದರು.

ಶಾಹೀನ್‌ ಸಲ್ಲಿಸಿರುವ ಅರ್ಜಿಯಲ್ಲಿ, ‘ಹರಿಯಾಣದಲ್ಲಿ ದ್ವೇಷ ಭಾಷಣಗಳು, ಹಿಂಸಾಚಾರ ಮತ್ತು ಸ್ವತ್ತುಗಳ ಹಾನಿ ನಡೆಯದಂತೆ ರಾಜ್ಯ ಸರ್ಕಾರ ಹಾಗೂ ಪೊಲೀಸರು ಎಚ್ಚರ ವಹಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಸುಪ್ರೀಂ ಕೋರ್ಟ್‌ ಆಗಸ್ಟ್‌ 2ರಂದು ಹೊರಡಿಸಿದ್ದ ಆದೇಶದಲ್ಲಿ ಉಲ್ಲೇಖಿಸಿತ್ತು. ಆದೇಶದ ಹೊರತಾಗಿಯೂ ವಿವಿಧ ರಾಜ್ಯಗಳಲ್ಲಿ ನಡೆದ ಸುಮಾರು 27 ರ‍್ಯಾಲಿಗಳಲ್ಲಿ ದ್ವೇಷ ಭಾಷಣಗಳನ್ನು ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ. ಜೊತೆಗೆ, ಕೆಲ ವಿಡಿಯೊ ಲಿಂಕ್‌ಗಳನ್ನೂ ಅರ್ಜಿಯೊಂದಿಗೆ ನೀಡಿದ್ದಾರೆ.

ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯಲ್ಲಿ ಆಗಸ್ಟ್‌ 4ರಂದು ನಡೆದ ರ‍್ಯಾಲಿಯೊಂದರಲ್ಲಿ ವಿಶ್ವ ಹಿಂದೂ ಪರಿಷತ್‌ನ ಮುಖಂಡರೊಬ್ಬರು ಪೊಲೀಸರ ಸಮ್ಮುಖದಲ್ಲೇ ಮುಸ್ಲಿಮರ ವಿರುದ್ಧ ಹಿಂಸಾಚಾರ ನಡೆಸಲು ಕರೆ ನೀಡಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. 

ಹರಿಯಾಣದ ನೂಹ್‌ನಲ್ಲಿ ಈಚೆಗೆ ಕೋಮುಗಲಭೆ ನಡೆದ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಕೆಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.