ಚಂಡೀಗಡ: ಪಂಜಾಬ್ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ತಮ್ಮ ಹೇಳಿಕೆಗಳಿಂದ ಸಾಕಷ್ಟು ಸುದ್ದಿಗೆ ಗ್ರಾಸವಾಗುತ್ತಿದ್ದಾರೆ. ಇದು ಅದೇ ಹೆಸರಿನ ಭಾರತದ ಫುಟ್‌ಬಾಲ್ ತಂಡದ ಗೋಲ್ ಕೀಪರ್ ಅಮರಿಂದರ್ ಸಿಂಗ್ ಅವರಿಗೆ ಪೀಕಲಾಟಕ್ಕೆ ಕಾರಣವಾಗಿದೆ.
ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೆ ಸಂಬಂಧಿಸಿದ ಸುದ್ದಿಗಳನ್ನು ಗೋಲ್ ಕೀಪರ್ ಅಮರಿಂದರ್ ಸಿಂಗ್ ಅವರಿಗೆ ಹಲವರು ತಪ್ಪಾಗಿ ಟ್ಯಾಗ್ ಮಾಡುತ್ತಿದ್ದಾರೆ. ಇದರಿಂದ ಬೇಸತ್ತಿರುವ ಅವರು, ನಾನವನಲ್ಲ, ನಾನು ಬೇರೆ ಎಂದು ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
‘ಆತ್ಮೀಯ ಮಾಧ್ಯಮ ಮಿತ್ರರೇ, ನಾನು ಭಾರತೀಯ ಫುಟ್‌ಬಾಲ್ ತಂಡದ ಗೋಲ್ ಕೀಪರ್ ಅಮರಿಂದರ್ ಸಿಂಗ್, ಪಂಜಾಬ್ ರಾಜ್ಯದ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅಲ್ಲ. ದಯವಿಟ್ಟು ಟ್ಯಾಗ್ ಮಾಡುವುದನ್ನು ನಿಲ್ಲಿಸಿ’ ಎಂದು ಟ್ವೀಟ್ ಮಾಡಿದ್ದಾರೆ.
ಗೋಲ್ ಕೀಪರ್ ಅಮರಿಂದರ್ ಸಿಂಗ್ ಮನವಿ ಮಾಡಿರುವ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್, ‘ನನ್ನ ಯುವ ಸ್ನೇಹಿತ, ನಿಮ್ಮ ಬಗ್ಗೆ ನನಗೆ ಸಹಾನುಭೂತಿ ಇದೆ. ನಿಮ್ಮ ಮುಂದಿನ ಆಟಕ್ಕೆ ಶುಭವಾಗಲಿ’ಎಂದು ಬರೆದಿದ್ದಾರೆ.
ಗೋಲ್ ಕೀಪರ್ ಅಮರಿಂದರ್ ಅವರು ಭಾರತ ಮತ್ತು ಎಟಿಕೆ ಮೋಹನ್ ಬಾಗನ್ಪರ ಆಡುತ್ತಿದ್ದಾರೆ. ಅಮರಿಂದರ್ ಸಿಂಗ್ ಅವರಿಗೆ ಬುಧವಾರ ಕೋವಿಡ್ ಪಾಸಿಟಿವ್ ಆಗಿದ್ದು, ಅಕ್ಟೋಬರ್ 1ರಿಂದ ಆರಂಭವಾಗಲಿರುವ ಎಸ್ಎಎಫ್ಎಫ್ ಚಾಂಪಿಯನ್‌ಶಿಪ್‌ನಲ್ಲಿ ಭಾವಹಿಸಲಿರುವ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಈ ಕ್ರೀಡಾಕೂಟದ 23 ಜನರ ತಂಡದಲ್ಲಿ ಅಮರಿಂದರ್ ಸಿಂಗ್ ಅವರ ಬದಲಿಗೆ ಧೀರಜ್ ಸಿಂಗ್ ಮೊಯ್ರಾಂಗ್‌ಥೆಮ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.