ADVERTISEMENT

ವಯನಾಡ್‌ನ ವೃದ್ಧ ರೈತ ದಂಪತಿಯ ಸಂಕಷ್ಟ ಹಂಚಿಕೊಂಡ ರಾಹುಲ್‌

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 14:19 IST
Last Updated 24 ಡಿಸೆಂಬರ್ 2020, 14:19 IST
ಮೇರಿ ಹಾಗೂ ಮ್ಯಾಥ್ಯೂ
ಮೇರಿ ಹಾಗೂ ಮ್ಯಾಥ್ಯೂ   

ತಿರುವನಂತಪುರ: ಕೇರಳದ ವಯನಾಡ್‌ ಜಿಲ್ಲೆಯಲ್ಲಿರುವ 90 ವರ್ಷದ ಮ್ಯಾಥ್ಯೂ ಹಾಗೂ 85 ವರ್ಷದ ಮೇರಿ ಎಂಬ ವೃದ್ಧ ರೈತ ದಂಪತಿ, ಕೃಷಿ ವಲಯದಲ್ಲಿ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ವಯನಾಡ್‌ ಸಂಸದ ರಾಹುಲ್‌ ಗಾಂಧಿ ಅವರು ಟ್ವಿಟರ್‌ನಲ್ಲಿ ವಿಡಿಯೊವೊಂದನ್ನು ಪೋಸ್ಟ್‌ ಮಾಡಿದ್ದಾರೆ.

ಇಳಿವಯಸ್ಸಿನಲ್ಲೂ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಈ ದಂಪತಿ, ತಾವು ಬೆಳೆದ ಉತ್ಪನ್ನಗಳ ಬೆಲೆ ಕುಸಿಯುತ್ತಿರುವುದರ ಬಗ್ಗೆ ಹಾಗೂ ಇದರಿಂದ ತಮಗಾಗುತ್ತಿರುವ ಸಮಸ್ಯೆಗಳ ಬಗ್ಗೆ ವಿಡಿಯೊದಲ್ಲಿ ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ. ವಯನಾಡ್‌ ಸಂಸದರ ಕಚೇರಿ ಅಧಿಕೃತ ಟ್ವಿಟರ್‌ನಲ್ಲಿ ಇದನ್ನು ಹಾಕಿರುವ ರಾಹುಲ್‌ ಗಾಂಧಿ ಅವರು, ‘ದೇಶದಾದ್ಯಂತ ಇರುವ ರೈತರ ನೋವು, ಸಮಸ್ಯೆ ಹಾಗೂ ಕಳವಳವನ್ನು ಈ ದಂಪತಿ ಹಂಚಿಕೊಂಡಿದ್ದಾರೆ. ಎಲ್ಲ ಭಾರತೀಯರು ಹಾಗೂ ಸರ್ಕಾರವು ಇವರ ಸಂಕಷ್ಟವನ್ನು ಕೇಳಬೇಕು’ ಎಂದು ವಿಡಿಯೊ ಜೊತೆ ಬರೆದಿದ್ದಾರೆ.

ಕೃಷಿ ವಲಯದಿಂದ ಬರುವ ಆದಾಯ ಇಳಿಕೆಯಾಗುತ್ತಿರುವುದರ ಕುರಿತು ಮರುಗುವ ದಂಪತಿ, ಕೃಷಿ ಉತ್ಪನ್ನಗಳ ಬೆಲೆ ಇಳಿಕೆಗೆ ಸರ್ಕಾರವೇ ಕಾರಣ ಎಂದು ದೂಷಿಸಿದ್ದಾರೆ. ‘ಭಾರತದಲ್ಲಿ ರೈತರಿಗೆ ಜೀವಿಸಲು ಆಗದಂಥ ಸ್ಥಿತಿ ನಿರ್ಮಾಣವಾಗಿದೆ. ರೈತರು ಇಲ್ಲವಾದರೆ ಭಾರತವು ಇಲ್ಲ’ ಎಂದು ಮ್ಯಾಥ್ಯೂ ವಿಡಿಯೊದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಕಳೆದ ಕೆಲ ವರ್ಷಗಳಿಂದ ಕಾಳುಮೆಣಸು, ಕಾಫಿ ಹಾಗೂ ಗೆಣಸಿನ ದರ ಗಣನೀಯವಾಗಿ ಇಳಿಕೆಯಾಗಿದೆ. ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದಾಗ, ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯುತ್ತಿತ್ತು. ಬೆಳಗ್ಗಿನಿಂದ ಸಂಜೆಯವರೆಗೂ ಹೊಲ, ಗದ್ದೆಗಳಲ್ಲಿ ದುಡಿದರೂ, ದುಡಿಮೆಗೆ ತಕ್ಕ ಆದಾಯ ಬರುತ್ತಿಲ್ಲ’ ಎಂದು ಮ್ಯಾಥ್ಯೂ ಹೇಳಿದ್ದಾರೆ.

ವಯನಾಡ್‌ಗೆ ರಾಹುಲ್‌ ಗಾಂಧಿ ಅವರು ಮುಂದಿನ ಬಾರಿ ಭೇಟಿ ನೀಡಿದಾಗ, ಈ ವೃದ್ಧ ರೈತ ದಂಪತಿಗಳ ಬಳಿಗೆ ಅವರನ್ನು ಕರೆದುಕೊಂಡು ಹೋಗಲು ಕಾಂಗ್ರೆಸ್‌ನ ಸ್ಥಳೀಯ ನಾಯಕರು ನಿರ್ಧರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.