ನವದೆಹಲಿ: ಪಾಕಿಸ್ತಾನ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ರಾಜತಾಂತ್ರಿಕ ಅಭಿಯಾನಕ್ಕೆ ವಿವಿಧ ದೇಶಗಳಿಗೆ ಭೇಟಿ ನೀಡುವ ಸರ್ವ ಪಕ್ಷಗಳ ನಿಯೋಗಗಳಿಗೆ ಸದಸ್ಯರ ಹೆಸರು ನೀಡುವಂತೆ ಕೇಂದ್ರ ಸರ್ಕಾರ ಕೇಳಿಲ್ಲ ಎಂಬ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಹೇಳಿಕೆಯನ್ನು ಕಾಂಗ್ರೆಸ್ ಸೋಮವಾರ ತಳ್ಳಿಹಾಕಿದೆ.
‘ಸರ್ಕಾರವು ಕಾಂಗ್ರೆಸ್‌ಗೆ ತಮ್ಮ ಸದಸ್ಯರ ಹೆಸರು ನೀಡುವಂತೆ ಕೇಳಿಲ್ಲ. ಪ್ರಮುಖ ನಾಯಕರನ್ನಷ್ಟೇ ಸೌಜನ್ಯಕ್ಕೆ ಕರೆದಿದೆ’ ಎಂಬ ರಿಜಿಜು ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ , ‘ಅದು ಸಂಪೂರ್ಣ ಸುಳ್ಳು. ರಿಜುಜು ಅವರು ಮೇ 16ರ ಬೆಳಿಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರೊಂದಿಗೆ ಸಂಭಾಷಣೆ ನಡೆಸಿದ್ದಾರೆ. ಆ ಸಂಭಾಷಣೆಯನ್ನು ಆಧರಿಸಿ ನಾಲ್ವರ ಹೆಸರುಗಳನ್ನು ಸೂಚಿಸಿ ರಿಜಿಜು ಅವರಿಗೆ ಪತ್ರ ಕಳುಹಿಸಲಾಗಿದೆ’ ಎಂದು ಹೇಳಿದ್ದಾರೆ.
‘ಕಾಂಗ್ರೆಸ್ ಸಂಸದರು ನಿಯೋಗದಲ್ಲಿ ಇರುವುದು ಮುಖ್ಯವಾಗಿದ್ದರೆ, ಪಕ್ಷದೊಂದಿಗೆ ಚರ್ಚಿಸಬೇಕಿತ್ತು. ನಿಯೋಗದಲ್ಲಿರಬೇಕಾದ ನಮ್ಮ ಸದಸ್ಯರ ಹೆಸರನ್ನು ನೀವು (ಸರ್ಕಾರ) ನಿರ್ಧರಿಸುತ್ತೀರಾ? ಆಯ್ಕೆ ಮಾಡಲಾದ ಹೆಸರುಗಳ ಬಗ್ಗೆ ನಮಗೆ ಯಾವುದೇ ತಕರಾರು ಇಲ್ಲ. ಆದರೆ, ಆಯ್ಕೆ ಮಾಡಿರುವ ಪ್ರಕ್ರಿಯೆಯಲ್ಲಿ ತಪ್ಪಾಗಿದೆ’ ಎಂದು ಅವರು ಹೇಳಿದ್ದಾರೆ.
ಮೋದಿ ನೇತೃತ್ವದ ಸರ್ಕಾರವು ಕೈಗೊಂಡಿರುವ ರಾಜತಾಂತ್ರಿಕ ಕಾರ್ಯಾಚರಣೆಯನ್ನು ‘ಹಾನಿ ನಿಯಂತ್ರಣ ನಿಯೋಗಗಳು’ ಎಂದು ವ್ಯಾಖ್ಯಾನಿಸಿದ ಜೈರಾಮ್, 2008ರ ದಾಳಿಯ ನಂತರ ಪ್ರತಿ ದೇಶವೂ ಪಾಕಿಸ್ತಾನವನ್ನು ಖಂಡಿಸಿತ್ತು. ಆದರೆ, ಇಂದು ಭಾರತವನ್ನು ಪಾಕಿಸ್ತಾನದೊಂದಿಗೆ ಸಮೀಕರಿಸಲಾಗುತ್ತಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.