ADVERTISEMENT

ಸ್ಥಳೀಯ ಉತ್ಪನ್ನಗಳ ಖರೀದಿಯೇ ದೀಪಾವಳಿ ಶುಭಾಶಯವಾಗಲಿ: ನರೇಂದ್ರ ಮೋದಿ

ವಾರಾಣಸಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಮೋದಿ ಕರೆ

ಪಿಟಿಐ
Published 9 ನವೆಂಬರ್ 2020, 8:32 IST
Last Updated 9 ನವೆಂಬರ್ 2020, 8:32 IST
ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ವಾರಾಣಸಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ವಾರಾಣಸಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.   

ನವದೆಹಲಿ: ‘ಈ ಬಾರಿ ದೀಪಾಳಿ ಹಬ್ಬದಲ್ಲಿ ಸ್ಥಳೀಯ ಉತ್ಪನ್ನಗಳನ್ನು ಬಳಸುವ ಮೂಲಕ, ಹಬ್ಬದ ಸಮಯದಲ್ಲಿ ಅವುಗಳ ಖರೀದಿಗೆ ಉತ್ತೇಜನ ನೀಡಬೇಕು‘ ಎಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಯಲ್ಲಿ ಮನವಿ ಮಾಡಿದರು.

ವಿಡಿಯೊ ಕಾನ್ಫರೆನ್ಸ್ ಮೂಲಕ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಸೋಮವಾರ ವಿವಿಧ ಕಾಮಗಾರಿಗ ಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಸ್ಥಳೀಯ ವಸ್ತುಗಳನ್ನು ಖರೀದಿಸುವ ಮೂಲಕ, ನಮ್ಮ ನಡುವಿನ ವ್ಯಾಪಾರಸ್ಥರೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಿ. ಇದರಿಂದ ದೇಶದ ಆರ್ಥಿಕತೆಗೆ ಹೊಸ ಉತ್ತೇಜನ ದೊರೆಯಲಿದೆ‘ ಎಂದು ಅವರು ಅಭಿಪ್ರಾಯಪಟ್ಟರು.

‘ಸ್ಥಳೀಯ ಉತ್ಪನ್ನಗಳನ್ನ ಖರೀದಿಸಲು ಉತ್ತೇಜಿಸುವ ಮೂಲಕವೇ ದೀಪಾವಳಿಯ ಶುಭಾಶಯಗಳನ್ನು ಹೇಳಿ. ನೀವು ಹೇಳುವ ಈ ಶುಭಾಶಯ ಎಲ್ಲೆಡೆ ಪಸರಿಸಲಿ‘ ಎಂದು ಹಾರೈಸಿದರು.

ADVERTISEMENT

‘ವಾರಾಣಸಿಯ ನಾಗರಿಕರು ಸೇರಿದಂತೆ ದೇಶದ ಮಹಾಜನತೆ ಈ ದೀಪಾವಳಿ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ. ‘ವೋಕಲ್ ಫಾರ್ ಲೋಕಲ್‌‘‍ ಉತ್ತೇಜಿಸಿ. ಪ್ರತಿಯೊಬ್ಬ ವ್ಯಕ್ತಿಯು ಹೆಮ್ಮೆಯಿಂದ ಉತ್ಪನ್ನಗಳನ್ನು ಖರೀದಿಸಿದಾಗ, ಅವುಗಳ ಬಗ್ಗೆ ಪ್ರೀತಿಯಿಂದ ಮಾತನಾಡಿದಾಗ, ಆ ಉತ್ಪನ್ನಗಳ ಬಗ್ಗೆ ಬೇರೆಯವರಿಗೂ ಸಂದೇಶ ತಲುಪುತ್ತದೆ. ಒಬ್ಬರಿಂದ ಒಬ್ಬರಿಗೆ ದಾಟುವ ಮಾಹಿತಿ, ಬಹಳ ದೂರದವರೆಗೂ ತಲುಪುತ್ತದೆ‘ ಎಂದು ಮೋದಿ ಹೇಳಿದರು.

‘ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದರಿಂದ ಆ ಉತ್ಪನ್ನಕ್ಕೆ ಒಂದು ಐಡೆಂಟಿಟಿ ಸಿಗುವ ಜತೆಗೆ, ಉತ್ಪಾದಿಸುವವರನ್ನೂ ಬಲವರ್ಧನೆಗೊಳಿಸಿದಂತಾಗುತ್ತದೆ. ಈ ಮೂಲಕ ಇಂಥ ಸ್ಥಳೀಯ ಉತ್ಪಾದಕರ ಜೀವನದಲ್ಲೂ ದೀಪಾವಳಿ ಸಂಭ್ರಮ ಮೂಡುವಂತೆ ಮಾಡಲು ಸಾಧ್ಯವಾಗುತ್ತದೆ‘ ಎಂದು ಮೋದಿಯವರು ಪ್ರತಿಪಾದಿಸಿದರು.

‘ಸ್ಥಳೀಯ ವಸ್ತುಗಳನ್ನು ಖರೀದಿಸುವುದೆಂದರೆ, ಕೇವಲ ದೀಪದ ಹಣತೆಗಳನ್ನಷ್ಟೇ ಖರೀದಿಸಿ ಸುಮ್ಮನಾಗುವುದಲ್ಲ. ನೀವು ಬಳಸುವ ಎಲ್ಲ ಉತ್ಪನ್ನಗಳೂ ಸ್ಥಳೀಯವೇ ಆಗಿರಲಿ. ಆಗ ಸ್ಥಳೀಯ ಉತ್ಪಾದಕರನ್ನು ಉತ್ತೇಜಿಸಿದಂತಾಗುತ್ತದೆ‘ ಎಂದು ಮೋದಿ ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.