ADVERTISEMENT

ರೈಲ್ವೆ ಸರಕು ಸಾಗಣೆ ಕಾರಿಡಾರ್ ವಿಳಂಬ: ಹಿಂದಿನ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ

ಪಿಟಿಐ
Published 29 ಡಿಸೆಂಬರ್ 2020, 9:34 IST
Last Updated 29 ಡಿಸೆಂಬರ್ 2020, 9:34 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಲಖನೌ: ‘ಹಿಂದಿನ ಸರ್ಕಾರ ರೈಲ್ವೆ ಇಲಾಖೆಯ ಸರಕು ಸಾಗಣೆ ಕಾರಿಡಾರ್ ಯೋಜನೆ ಅನುಷ್ಠಾನದಲ್ಲಿ ವಿಳಂಬ ನೀತಿ ಅನುಸರಿಸಿದೆ‘ ಎಂದು ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ, ‘ಈ ಯೋಜನೆಯ ಪಾಲುದಾರರೊಂದಿಗೆ ಚರ್ಚೆ ನಡೆಸಿ, ತ್ವರಿತಗತಿಯಲ್ಲಿ ಯೋಜನೆ ಪೂರ್ಣಗೊಳಿಸಲು ನಮ್ಮ ಸರ್ಕಾರ ಮುಂದಾಗಿದೆ‘ ಎಂದು ತಿಳಿಸಿದರು.

ವಿಡಿಯೊ ಕಾನ್ಫರೆನ್ಸ್‌ ಮೂಲಕಹೊಸ ಭಾವ್‌ಪುರ್–ಹೊಸ ಖುರ್ಝಾ ವಿಭಾಗದ ಸರಕು ಸಾಗಣೆ ಕಾರಿಡಾರ್‌ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ‘ಈ ಯೋಜನೆಗೆ 2006ರಲ್ಲಿ ಅನುಮೋದನೆ ನೀಡಲಾಗಿದೆ. ಆದರೆ, ಯೋಜನೆಯ ಗಂಭೀರತೆ ಮತ್ತು ತುರ್ತು ಅವಶ್ಯಕತೆಯನ್ನು ಅರಿಯದ ಹಿಂದಿನ ಸರ್ಕಾರ, ಇದನ್ನು ಅನುಷ್ಠಾನಗೊಳಿಸುವಲ್ಲಿ ವಿಳಂಬ ಮಾಡಿದೆ‘ ಎಂದು ಟೀಕಿಸಿದರು.

ಈ ಯೋಜನೆಯಡಿ 2014 ರವರೆಗೆ ಒಂದು ಕಿ.ಮೀನಷ್ಟು ಕೆಲಸವಾಗಿರಲಿಲ್ಲ. ಮಂಜೂರಾದ ಹಣವನ್ನು ಸರಿಯಾಗಿ ಖರ್ಚು ಮಾಡಿರಲಿಲ್ಲ. 2014ರ ನಂತರ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಈ ಯೋಜನೆ ಪುನಃ ಆರಂಭವಾಯಿತು. ಅಧಿಕಾರಿಗಳು ಈ ಯೋಜನೆಯನ್ನು ಮುಂದುವರಿಸುವಂತೆ ಕೇಳಿದರು. ಆ ವೇಳೆಗೆ ಯೋಜನೆಗಾಗಿ ನಿಗದಿಪಡಿಸಿದ್ದ ಬಜೆಟ್‌ ಕೂಡ 11 ಪಟ್ಟು ಏರಿಕೆಯಾಗಿತ್ತು‘ ಎಂದು ಅವರು ವಿವರಿಸಿದರು.

ADVERTISEMENT

‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ನಾನು ವೈಯಕ್ತಿಕವಾಗಿ ಈ ಯೋಜನೆ ಮೇಲ್ವಿಚಾರಣೆ ನಡೆಸಿದ್ದೇನೆ. ಮತ್ತು ಪಾಲುದಾರರೊಂದಿಗೆ ಚರ್ಚಿಸಿ, ಹೊಸ ತಂತ್ರಜ್ಞಾನವನ್ನು ಪಡೆದಿದ್ದೇನೆ. ಇದರ ಪರಿಣಾಮವಾಗಿ ಮುಂದಿನ ಕೆಲವು ತಿಂಗಳುಗಳಲ್ಲಿ ಸುಮಾರು 1100 ಕಿ.ಮೀ ರೈಲ್ವೆ ಕೆಲಸ ಪೂರ್ಣಗೊಳ್ಳಲಿದೆ‘ ಎಂದು ಪ್ರಧಾನಿ ಭರವಸೆ ನೀಡಿದರು.

‘ಎಂಟು ವರ್ಷಗಳಲ್ಲಿ ಒಂದು ಕಿ.ಮೀ ಕೂಡ ಕಾರಿಡಾರ್ ಕೆಲಸವಾಗಿಲ್ಲ. ಆದರೆ, 6 ವರ್ಷಗಳಲ್ಲಿ 1100 ಕಿ.ಮೀ. ಕೆಲಸವಾಗಲಿದೆ ಎಂದರೆ, ಊಹಿಸಿಕೊಳ್ಳಿ‘ ಎಂದು ಅವರು ಹೇಳಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ಇಡಿಎಫ್‌ಸಿಯ ಕಾರ್ಯಾಚರಣೆ ಕೇಂದ್ರವನ್ನು ಉದ್ಘಾಟಿಸಿದರು. ನಂತರ 1.5 ಕಿ.ಮೀ ಉದ್ದದ ಗೂಡ್ಸ್‌ ರೈಲಿಗೆ ಹಸಿರು ನಿಶಾನೆ ತೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.