ನವದೆಹಲಿ: ಕೃಷಿ ಹಾಗೂ ಸಂಬಂಧಿತ ಕ್ಷೇತ್ರಗಳ ಅಭಿವೃದ್ಧಿಗೆ ಇನ್ನಷ್ಟು ಉತ್ತೇಜನ ನೀಡಲು ‘ಪ್ರಧಾನಮಂತ್ರಿ ಧನ–ಧಾನ್ಯ ಯೋಜನೆ’ಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಈ ಯೋಜನೆಯು ದೇಶದ 100 ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳಲಿದೆ. ಈ ಯೋಜನೆಯ ಅವಧಿ ಆರು ವರ್ಷಗಳು. ವಾರ್ಷಿಕ ₹24 ಸಾವಿರ ಕೋಟಿ ವೆಚ್ಚ ಒಳಗೊಂಡಿದೆ. ಈ ಯೋಜನೆಯಿಂದ 1.7 ಕೋಟಿ ರೈತರಿಗೆ ಅನುಕೂಲವಾಗಲಿದೆ. ಈ ಯೋಜನೆ ಬಗ್ಗೆ 2025–26ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು.
ಕೃಷಿ ಉತ್ಪಾದಕತೆ ಹೆಚ್ಚಳ, ಬೆಳೆಗಳಲ್ಲಿ ವೈವಿಧ್ಯ, ಸುಸ್ಥಿರ ಕೃಷಿ ಪದ್ಧತಿಗಳ ಅಳವಡಿಕೆಗೆ ಉತ್ತೇಜನ, ಪಂಚಾಯಿತಿ ಮತ್ತು ಬ್ಲಾಕ್ ಮಟ್ಟದಲ್ಲಿ ಕೊಯ್ಲಿನ ನಂತರದ ಸಂಗ್ರಹಣೆ ಹೆಚ್ಚಿಸುವುದು, ನೀರಾವರಿ ಸೌಲಭ್ಯಗಳ ಸುಧಾರಣೆ, ದೀರ್ಘಾವಧಿ ಮತ್ತು ಅಲ್ಪಾವಧಿ ಸಾಲದ ಲಭ್ಯತೆಯನ್ನು ಸುಗಮಗೊಳಿಸುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯೋಜನೆಯ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುವುದು. ಜಿಲ್ಲಾ ಧನ ಧಾನ್ಯ ಸಮಿತಿಯು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳ ಯೋಜನೆಗೆ ಅಂತಿಮ ರೂಪ ನೀಡುತ್ತದೆ. ಈ ಸಮಿತಿಯಲ್ಲಿ ಪ್ರಗತಿಪರ ರೈತರು ಇರುತ್ತಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.