
ನವದೆಹಲಿ: ‘ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಪ್ರಯುಕ್ತ ಸಂಸತ್‌ನ ಎರಡೂ ಸದನಗಳಲ್ಲಿ ಚರ್ಚೆ ನಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಪಡೆಗೆ ಭಾರಿ ಪೆಟ್ಟು ಬಿದ್ದಿದೆ. ಅವರು ಸುಳ್ಳು ಹೇಳಿರುವುದು ಜಗಜ್ಜಾಹೀರಾಗಿದ್ದು, ಅವರ ಮುಖವಾಡ ಕಳಚಿಬಿದ್ದಿದೆ’ ಎಂದು ಕಾಂಗ್ರೆಸ್ ಪಕ್ಷ ಗುರುವಾರ ಹೇಳಿದೆ.
ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ವಂದೇ ಮಾತರಂ ಕುರಿತು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ವಾರ ವಿಸ್ತೃತ ಚರ್ಚೆ ನಡೆದಿದೆ. ರಾಷ್ಟ್ರ ಗೀತೆ ಬಗ್ಗೆಯೂ ಕೆಲವರು ಪ್ರಸ್ತಾಪಿಸಿದರು’ ಎಂದಿದ್ದಾರೆ.
‘ರುದ್ರಾಂಗ್ಶು ಮುಖರ್ಜಿ (ಕೃತಿ: ಸಾಂಗ್ ಆಫ್ ಇಂಡಿಯಾ:ಎ ಸ್ಟಡಿ ಆಫ್ ದಿ ನ್ಯಾಷನಲ್ ಆ್ಯಂಥೆಮ್) ಹಾಗೂ ಸವ್ಯಸಾಚಿ ಭಟ್ಟಾಚಾರ್ಯ(ಕೃತಿ: ವಂದೇ ಮಾತರಂ) ಅವರು ರಚಿಸಿರುವ ಪುಸ್ತಕಗಳು ವಂದೇ ಮಾತರಂ ಹಾಗೂ ರಾಷ್ಟ್ರ ಗೀತೆ ಕುರಿತ ಸ್ಪಷ್ಟ ಹಾಗೂ ಅಧಿಕೃತ ಕೃತಿಗಳು ಎಂದೇ ಖ್ಯಾತಿಯಾಗಿವೆ. ಮೋದಿ ಹಾಗೂ ಅವರ ಪಡೆ ಈ ಕೃತಿಗಳನ್ನು ಓದಿಯೇ ಇಲ್ಲ’ ಎಂದು ರಮೇಶ್ ಅವರು ಟೀಕಾಪ್ರಹಾರ ಮಾಡಿದ್ದಾರೆ.
ಜೊತೆಗೆ, ಈ ಕೃತಿಗಳ ಮುಖಪುಟಗಳ ಸ್ಕ್ರೀನ್‌ಶಾಟ್‌ಗಳನ್ನು ಕೂಡ ಅವರು ಹಂಚಿಕೊಂಡಿದ್ದಾರೆ.
‘ಸಂಸತ್‌ನಲ್ಲಿ ನಡೆದ ಚರ್ಚೆ ವೇಳೆ ಸರಿಯಾದ ಮಾತಿನ ಏಟು ಕೊಟ್ಟ ಬಳಿಕ, ಅವರು ಈ ಕೃತಿಗಳ್ನು ಓದುತ್ತಾರೆ ಎಂಬುದಾಗಿ ನಿರೀಕ್ಷಿಸುವುದು ಕೂಡ ತಪ್ಪಾಗುತ್ತದೆ’ ಎಂದು ಅವರು ಕುಟುಕಿದ್ದಾರೆ.
‘ಪ್ರಧಾನಿ ಹಾಗೂ ಅವರ ಬೆಂಬಲಿಗರು ತಪ್ಪು ಮಾಹಿತಿ ಹಬ್ಬಿಸುತ್ತಿದ್ದಾರೆ. ಅದನ್ನು ತೊಡೆದು ಹಾಕಿ, ಸರಿಯಾದ ಮಾಹಿತಿ ನೀಡಬೇಕು ಎಂಬ ಉದ್ದೇಶದಿಂದ, ರಾಷ್ಟ್ರ ನಿರ್ಮಾತೃಗಳು ಬರೆದ 12 ಪತ್ರಗಳು ಹಾಗೂ ಟಿಪ್ಪಣಿಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ’ ಎಂದು ಅವರು ಮತ್ತೊಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.