ADVERTISEMENT

ಯುದ್ಧ ಆರಂಭಿಸುವುದು ಸುಲಭ, ಮುಗಿಸುವುದು ಕಷ್ಟ: ಇಮ್ರಾನ್‌

ಪಿಟಿಐ
Published 19 ಫೆಬ್ರುವರಿ 2019, 17:56 IST
Last Updated 19 ಫೆಬ್ರುವರಿ 2019, 17:56 IST
ಇಮ್ರಾನ್ ಖಾನ್
ಇಮ್ರಾನ್ ಖಾನ್   

ಇಸ್ಲಾಮಾಬಾದ್‌: ‘ಯುದ್ಧ ಆರಂಭಿಸುವುದು ನಮ್ಮ ಕೈಯಲ್ಲಿದೆ. ಅದು ಸುಲಭವೂ ಹೌದು. ಆದರೆ, ಮುಗಿಸುವುದು ಮಾತ್ರ ನಮ್ಮ ಕೈಯಲ್ಲಿಲ್ಲ. ಏನಾಗಬಹುದು ಎಂಬುದು ಯಾರಿಗೂ ಗೊತ್ತಿಲ್ಲ’ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ ಹೇಳಿದ್ದಾರೆ.

‘ಪುಲ್ವಾಮಾ ದಾಳಿಗೆ ಪಾಕಿಸ್ತಾನದ ಮೇಲೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಭಾರತದ ರಾಜಕಾರಣಿಗಳು ಆಗ್ರಹಪಡಿಸುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಒಂದು ವೇಳೆ ಭಾರತ ಆಕ್ರಮಣಕ್ಕೆ ಮುಂದಾದರೆ, ನಾವು ಪ್ರತಿದಾಳಿ ಬಗ್ಗೆ ಯೋಚಿಸುವುದಷ್ಟೇ ಅಲ್ಲ, ಅದನ್ನು ಮಾಡಿ ತೋರಿಸುತ್ತೇವೆ’ ಎಂದು ಎಚ್ಚರಿಸಿದ್ದಾರೆ.

‘ಆಫ್ಗಾನಿಸ್ತಾನದಂತೆ ಕಾಶ್ಮೀರ ಸಮಸ್ಯೆಗೂ ಮಾತುಕತೆಯೊಂದೇ ಪರಿಹಾರ’ ಎಂದು ಇಮ್ರಾನ್‌ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಮಿಲಿಟರಿ ಪ್ರಯೋಗವೊಂದೇ ಉತ್ತರವೇ?

‘ಕಾಶ್ಮೀರ ಸಮಸ್ಯೆಯನ್ನು ಸೇನಾಶಕ್ತಿ ಪ್ರಯೋಗಿಸಿ ಗೆಲ್ಲಲು ಭಾರತ ಯತ್ನಿಸಿದರೆ ಅದು ಎಂದಿಗೂ ಯಶಸ್ವಿಯಾಗುವುದಿಲ್ಲ’ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ ಕಾರಣ ಭಾರತದ ಆರೋಪಗಳಿಗೆ ತಕ್ಷಣ ಪ್ರತಿಕ್ರಿಯಿಸಲು ಆಗಲಿಲ್ಲ ಎಂದು ಅವರು ಹೇಳಿದ್ದಾರೆ.

‘ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೇ ಭಾರತ ಸುಮ್ಮನೆ ಆರೋಪಿಸುತ್ತಿದೆ. ಕಳೆದ 15 ವರ್ಷಗಳಿಂದ ಪಾಕಿಸ್ತಾನವು ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ. ಹೀಗಿರುವಾಗ ಪುಲ್ವಾಮಾದಂತಹ ದಾಳಿಯಿಂದ ನಮಗೆ ಹೇಗೆ ಲಾಭವಾಗುತ್ತದೆ’ ಎಂದು ಅವರು ಪ್ರಶ್ನಿಸಿದ್ದಾರೆ.

**

ಈಗ ಇರುವುದು ಹೊಸ ಮನಸ್ಥಿತಿಯ ನಯಾ ಪಾಕಿಸ್ತಾನ. ಮಾತುಕತೆಗೆ ನಾವು ಸಿದ್ಧರಿದ್ದೇವೆ.
-ಇಮ್ರಾನ್ ಖಾನ್, ಪಾಕಿಸ್ತಾನದ ಪ್ರಧಾನಿ

**

ನವಜೋತ್ ಸಿಂಗ್ ಸಿಧು ಅವರೇ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ನಿಮ್ಮ ಸ್ನೇಹಿತ ಇಮ್ರಾನ್ ಖಾನ್ ಮನವೊಲಿಸಿ.
-ದಿಗ್ವಿಜಯ ಸಿಂಗ್, ಕಾಂಗ್ರೆಸ್ ಮುಖಂಡ

**

ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿರುವ ಬಗ್ಗೆ ಭದ್ರತಾ ಪಡೆಗಳಲ್ಲಿ ಪ್ರಬಲ ಸಾಕ್ಷ್ಯಗಳಿವೆ.
-ರಾಜ್ಯವರ್ಧನ್ ಸಿಂಗ್ ರಾಥೋಡ್, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.