ADVERTISEMENT

ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸುವ ಲೈಟ್‌ ಹೌಸ್‌ ಯೋಜನೆಗೆ ಪ್ರಧಾನಿ ಶಂಕುಸ್ಥಾಪನೆ

ಆರು ರಾಜ್ಯಗಳ ಆರು ಪ್ರದೇಶಗಳಲ್ಲಿನ ‘ಎಲ್‌ಎಚ್‌ಪಿ’ ಅನುಷ್ಠಾನ

ಪಿಟಿಐ
Published 1 ಜನವರಿ 2021, 9:54 IST
Last Updated 1 ಜನವರಿ 2021, 9:54 IST
ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಆನ್‌ಲೈನ್ ಮೂಲಕ ಎಲ್‌ಎಚ್‌ಪಿ ಯೋಜನೆಗೆ ಚಾಲನೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಆನ್‌ಲೈನ್ ಮೂಲಕ ಎಲ್‌ಎಚ್‌ಪಿ ಯೋಜನೆಗೆ ಚಾಲನೆ ನೀಡಿದರು.   

ನವದೆಹಲಿ: ‌ಕಡಿಮೆ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸುವ ‘ಲೈಟ್ ಹೌಸ್‌ ಪ್ರಾಜೆಕ್ಟ್‌(ಎಲ್‌ಎಚ್‌ಪಿ)‘ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.

ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆದ ಈ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ‘ಬಡವರು ಮತ್ತು ಮಧ್ಯಮವರ್ಗದವರಿಗೆ ವಸತಿ ಸೌಲಭ್ಯ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ‘ ಎಂದು ತಿಳಿಸಿದರು.

ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್-ಇಂಡಿಯಾ (ಜಿಎಚ್‌ಟಿಸಿ-ಇಂಡಿಯಾ) ಅಡಿ ಆರು ರಾಜ್ಯಗಳ, ಆರು ತಾಣಗಳಲ್ಲಿ ಎಲ್‌ಎಚ್‌ಪಿ ಯೋಜನೆಯಡಿ ಈ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ನಗರದಲ್ಲಿ ಒಂದು ಸಾವಿರ ಮನೆಗಳಂತೆ12 ತಿಂಗಳೊಳಗೆ ದೇಶದ ಆರು ರಾಜ್ಯಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡುವ ಗುರಿ ನಿಗದಿಪಡಿಸಲಾಗಿದೆ.

ADVERTISEMENT

‘ಲೈಟ್ ಹೌಸ್ ಯೋಜನೆ‘ ಕುರಿತು ಮಾತನಾಡಿದ ಅವರು, ‘ಆಧುನಿಕ ತಂತ್ರಜ್ಞಾನ ಮತ್ತು ನವೀನ ಪ್ರಕ್ರಿಯೆಗಳಿಂದಾಗಿ, ಈ ಯೋಜನೆಯಡಿ ಕಡಿಮೆ ಸಮಯದಲ್ಲಿ, ಕೈಗೆಟಕುವ ಬೆಲೆಯಲ್ಲಿ ಉನ್ನತ ತಂತ್ರಜ್ಞಾನದ ಮನೆಗಳನ್ನು ನಿರ್ಮಿಸಲಾಗುತ್ತಿದೆ‘ ಎಂದು ಹೇಳಿದರು.

‘ಫ್ರಾನ್ಸ್, ಜರ್ಮನಿ ಮತ್ತು ಕೆನಡಾದಂತಹ ದೇಶಗಳಲ್ಲಿ ಅನುಸರಿಸಿರುವ ಆಧುನಿಕ ನಿರ್ಮಾಣ ಪದ್ಧತಿಗಳನ್ನು ಈ ಯೋಜನೆಯಡಿ ಅಳವಡಿಸಲಾಗುತ್ತಿದೆ‘ ಎಂದು ಹೇಳಿದ ಪ್ರಧಾನಿಯವರು, ವಾಸ್ತುಶಿಲ್ಪಿಗಳು, ಯೋಜನಾ ಅಧಿಕಾರಿಗಳು, ಎಂಜಿನಿಯರ್‌ಗಳು ಮತ್ತು ವಿದ್ಯಾರ್ಥಿಗಳು ಈ ತಂತ್ರಜ್ಞಾನಗಳನ್ನು ಬಳಕೆ ಮಾಡಿರುವ ಸ್ಥಳಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರೊಂದಿಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವ, ತ್ರಿಪುರ, ಜಾರ್ಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳು ಉಪಸ್ಥಿತರಿದ್ದರು.

ಇಂದೋರ್ (ಮಧ್ಯಪ್ರದೇಶ), ರಾಜ್‌ಕೋಟ್ (ಗುಜರಾತ್), ಚೆನ್ನೈ (ತಮಿಳುನಾಡು), ರಾಂಚಿ (ಜಾರ್ಖಂಡ್), ಅಗರ್ತಲಾ (ತ್ರಿಪುರ) ಮತ್ತು ಲಖನೌ (ಉತ್ತರ ಪ್ರದೇಶ) ದಲ್ಲಿ ಎಲ್‌ಎಚ್‌ಪಿ ಯೋಜನೆಯಡಿ ಮನೆಗಳನ್ನು ನಿರ್ಮಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.