ಶಿಮ್ಲಾ/ಧರ್ಮಶಾಲಾ (ಪಿಟಿಐ): ಭಾರಿ ಮಳೆಯಿಂದಾಗಿ ತೀವ್ರ ಹಾನಿಗೆ ಒಳಗಾಗಿರುವ ಹಿಮಾಚಲ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭೇಟಿ ನೀಡಿದರು. ರಾಜ್ಯಕ್ಕೆ ತಕ್ಷಣಕ್ಕೆ ₹1,500 ಕೋಟಿ ಬಿಡುಗಡೆ ಮಾಡುವುದಾಗಿ ಅವರು ಘೋಷಣೆ ಮಾಡಿದರು.
ಜೂನ್ 20ರಿಂದ ಸೆಪ್ಟೆಂಬರ್ 8ರವರೆಗೆ ರಾಜ್ಯಕ್ಕೆ ಸುಮಾರು ₹4,122 ಕೋಟಿ ನಷ್ಟವಾಗಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಮೃತಪಟ್ಟ ಕುಟುಂಬಗಳಿಗೆ ₹2 ಲಕ್ಷ ಮತ್ತು ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ನೀಡುವುದಾಗಿ ಪ್ರಧಾನಿ ಹೇಳಿದರು. ಹೆಲಿಕಾಪ್ಟರ್ ಮೂಲಕ ಪ್ರಧಾನಿ ಮೋದಿ ಅವರು ವೈಮಾನಿಕ ಸಮೀಕ್ಷೆ ನಡೆಸಿ ಹಾನಿಯ ಮಾಹಿತಿ ಪಡೆದುಕೊಂಡರು.
ರಾಜ್ಯ ವಿಪತ್ತು ನಿರ್ವಹಣೆ ಪಡೆ ನಿಧಿಗೆ ಮತ್ತು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ ಕೇಂದ್ರ ಸರ್ಕಾರವು ನೀಡುವ ಹಣವನ್ನೇ ಮುಂಗಡವಾಗಿ (₹1,500 ಕೋಟಿ) ನೀಡಲಾಗುತ್ತಿದೆ. ಈ ನಿಧಿಗಳಿಗೆ ಎರಡನೇ ಕಂತಿನಲ್ಲಿ ಕೇಂದ್ರವು ಹಣ ಪಾವತಿ ಮಾಡಬೇಕಿತ್ತು.
ಮಳೆಹಾನಿ ಅಂದಾಜಿಸಲು ಕೇಂದ್ರ ಸರ್ಕಾರವು ರಾಜ್ಯಕ್ಕೆ ಈಗಾಗಲೇ ಸಚಿವರ ತಂಡವನ್ನು ರಾಜ್ಯಕ್ಕೆ ಕಳುಹಿಸಿದೆ. ಈ ತಂಡದ ವರದಿ ಬಂದ ಬಳಿಕ, ಕೇಂದ್ರ ಸರ್ಕಾರವು ಮುಂದಿನ ಹಂತದ ಆರ್ಥಿಕ ನೆರವು ನೀಡಲಿದೆ ಎನ್ನಲಾಗುತ್ತಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಮೃತಪಟ್ಟ ಕುಟುಂಬದವರನ್ನು ಪ್ರಧಾನಿ ಮೋದಿ ಭೇಟಿ ಮಾಡಿದರು.
‘ಶಿಕ್ಷಣ, ಕೃಷಿ ಸೇರಿದಂತೆ ರಾಜ್ಯದಲ್ಲಿ ಹಲವು ಕ್ಷೇತ್ರಗಳಿಗೆ ಭಾರಿ ನಷ್ಟವಾಗಿದೆ. ಜನರ ಜೀವನ ಸಹಜಸ್ಥಿತಿಗೆ ಮರಳುವಂತೆ ಮಾಡಬೇಕಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆಗಳ ಮರು ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ, ಶಾಲೆಗಳನ್ನು ಮತ್ತೊಮ್ಮೆ ನಿರ್ಮಾಣ ಮಾಡಬೇಕಿದೆ. ಈ ಎಲ್ಲದರ ಕುರಿತೂ ಬಹು ಆಯಾಮದ ಯೋಜನೆಗಳನ್ನು ರೂಪಿಸಬೇಕು’ ಎಂದು ಪ್ರಧಾನಿ ಮೋದಿ ಹೇಳಿದರು.
ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಇದ್ದರು.
ರಾಜ್ಯಗಳಿಗೆ ವಿಪತ್ತು ನಿರ್ವಹಣೆಯ ಅಡಿ ನೀಡಲಾಗುವ ಸೌಲಭ್ಯವನ್ನು ಮುಂಚಿತವಾಗಿಯೇ ನೀಡುವ ಬಗ್ಗೆ ನಿಯಮಗಳನ್ನು ರೂಪಿಸಲಾಗುತ್ತಿದೆನರೇಂದ್ರ ಮೋದಿ ಪ್ರಧಾನಿ
ಪಂಜಾಬ್‌ಗೆ ₹1,600 ಕೋಟಿ ನೆರವು
ಪ್ರವಾಹದಿಂದ ತೀವ್ರ ಹಾನಿಗೆ ಒಳಗಾಗಿರುವ ಪಂಜಾಬ್‌ಗೆ ಪ್ರಧಾನಿ ಮೋದಿ ಅವರು ₹1,600 ಕೋಟಿ ನೆರವು ಘೋಷಣೆ ಮಾಡಿದರು. ರಾಜ್ಯಕ್ಕೆ ಈಗಾಗಲೇ ₹12 ಸಾವಿರ ಕೋಟಿ ನೆರವನ್ನು ಕೇಂದ್ರ ಸರ್ಕಾರ ನೀಡಿದೆ. ರಾಜ್ಯಕ್ಕೆ ಸುಮಾರು ₹13 ಸಾವಿರ ಕೋಟಿ ನಷ್ಟವಾಗಿದೆ’ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ. ಮನೆ ಸಂಬಂಧಿತ ಅವಘಡಗಳಲ್ಲಿ ಮೃತಪಟ್ಟವರಿಗೆ ₹2 ಲಕ್ಷ ಮತ್ತು ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.