ಮಹಾಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ ಪ್ರಧಾನಿ ಮೋದಿ
ಲಖನೌ: ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತ್ರಿವೇಣಿ ಸಂಗಮದಲ್ಲಿ ಬುಧವಾರ ಪವಿತ್ರ ಸ್ನಾನ ಮಾಡಿದರು. ವೈದಿಕರ ಮಂತ್ರಘೋಷಗಳ ಮಧ್ಯೆ ಕೈಯಲ್ಲಿ ರುದ್ರಾಕ್ಷಿ ಜಪಮಾಲೆ ಹಿಡಿದ ಪ್ರಧಾನಿ ಮೋದಿ ಅವರು ಗಂಗಾ ನದಿಗೆ ಆರತಿ ಬೆಳಗಿ, ಸೂರ್ಯನಿಗೆ ಅರ್ಗ್ಯ ಅರ್ಪಿಸಿದರು.
ಸೀರೆ, ಹಾಲು ಹಾಗೂ ಹೂವುಗಳನ್ನು ಗಂಗಾ ನದಿಗೆ ಅರ್ಪಿಸಿ ಪ್ರಧಾನಿ ಮೋದಿ ಅವರು ಪೂಜೆ ಸಲ್ಲಿಸಿದರು. ಪ್ರಧಾನಿ ಅವರು ಪವಿತ್ರ ಸ್ನಾನ ಮಾಡಲು ಹಾಗೂ ಪೂಜೆ ಸಲ್ಲಿಸಲು ತ್ರಿವೇಣಿ ಸಂಗಮದ ಬಳಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಪ್ರಧಾನಿ ಮೋದಿ ಅವರೊಂದಿಗೆ ಜೊತೆಗೂಡಿದ್ದರು. ಸಂಗಮಕ್ಕೆ ತಲುಪುವ ಮೊದಲು ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರು ಗಂಗಾ ನದಿಯಲ್ಲಿ ಬೋಟ್ ವಿಹಾರ ನಡೆಸಿದರು. ಈ ವೇಳೆ ನದಿಯ ತಟಗಳಲ್ಲಿ ನಿಂತಿದ್ದ ಭಕ್ತರತ್ತ ಪ್ರಧಾನಿ ಮೋದಿ ಅವರು ಕೈಬೀಸಿದರು.
ಒಟ್ಟು ಎರಡು ತಾಸುಗಳವರೆಗೆ ಅವರು ಪ್ರಯಾಗರಾಜ್‌ನಲ್ಲಿದ್ದರು. ಆದರೆ, ಮಹಾಕುಂಭ ಮೇಳದಲ್ಲಿದ್ದ ಸಂತರನ್ನು ಮೋದಿ ಅವರು ಭೇಟಿಯಾಗಲಿಲ್ಲ. ಸಂತರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿತ್ತು. ಲೇಟೆ ಹುನುಮಾನ್ ಮಂದಿರ ಹಾಗೂ ನದಿ ತೀರದಲ್ಲಿರುವ ‘ಅಕ್ಷಯ್‌ವಟ್’ಗೂ ಮೋದಿ ಅವರು ಭೇಟಿ ನೀಡಲಿಲ್ಲ. ಮೋದಿ ಅವರು ಇಲ್ಲಿಗೆ ಬರಬಹುದು ಎಂದು ಭಕ್ತರು ನೂರಾರು ಸಂಖ್ಯೆಯಲ್ಲಿ ಇಲ್ಲಿ ಸೇರಿದ್ದರು.
ಬುಧವಾರ (ಫೆ.5) ಹಿಂದೂ ಕ್ಯಾಲೆಂಡರ್‌ನ ‘ಮಾಘ’ ಮಾಸದಲ್ಲಿ ಆಚರಿಸಲಾಗುವ ‘ಗುಪ್ತ ನವರಾತ್ರಿ’ಯ ‘ಅಷ್ಟಮಿ’ ದಿನವಾಗಿದ್ದರಿಂದ ಪ್ರಧಾನಿ ಮೋದಿ ಅವರು ಮಹಾಕುಂಭ ಮೇಳದಲ್ಲಿ ಭಾಗವಹಿಸಿದರು.
ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದು ಎಂದರೆ ಅದೊಂದು ಅಧ್ಯಾತ್ಮದ ಅನುಭೂತಿ. ಕೋಟಿ ಕೋಟಿ ಜನರಂತೆ ನಾನೂ ಪವಿತ್ರ ಸ್ನಾನ ಮಾಡಿದೆ. ನನ್ನೊಳಗೆ ಭಕ್ತಿ–ಭಾವ ತುಂಬಿಕೊಂಡಿತು. ಗಂಗಾ ಮಾತೆಯು ಎಲ್ಲರಿಗೂ ಶಾಂತಿ, ಜ್ಞಾನ, ಉತ್ತಮ ಆರೋಗ್ಯ ಮತ್ತು ಸೌಹಾರ್ದವನ್ನು ಕರುಣಿಸಲಿ.–ನರೇಂದ್ರ ಮೋದಿ, ಪ್ರಧಾನಿ (‘ಎಕ್ಸ್’ನಲ್ಲಿನ ಪೋಸ್ಟ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.