ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ
–ಪಿಟಿಐ ಚಿತ್ರ
ರಾಂಚಿ(ಜಾರ್ಖಂಡ್): ‘ಭಯೋತ್ಪಾದಕ ದಾಳಿ ನಡೆಯವ ಸಾಧ್ಯತೆ ಬಗ್ಗೆ ಗುಪ್ತಚರ ಮಾಹಿತಿ ಪಡೆದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರ ಪ್ರವಾಸವನ್ನು ರದ್ದುಪಡಿಸಿದ್ದರು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಆರೋಪಿಸಿದ್ದಾರೆ.
ರಾಂಚಿಯಲ್ಲಿ ನಡೆದ ‘ಸಂವಿಧಾನ ರಕ್ಷಿಸಿ’ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದಕ ದಾಳಿಯ ಕುರಿತಂತೆ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಭದ್ರತಾ ವೈಫಲ್ಯದ ಬಗ್ಗೆ ಕೇಂದ್ರ ಒಪ್ಪಿಕೊಂಡ ಮೇಲೆ ಪಹಲ್ಗಾಮ್‌ನಲ್ಲಿ ನಡೆದ ಪ್ರಾಣ ಹಾನಿಗೆ ಕೇಂದ್ರ ಸರ್ಕಾರವನ್ನೇ ಹೊಣೆ ಮಾಡಬೇಕಲ್ಲವೇ’ ಎಂದು ಪ್ರಶ್ನಿಸಿದ್ದಾರೆ.
ಉಗ್ರರ ವಿರುದ್ಧದ ಹೋರಾಟಕ್ಕೆ ಇಡೀ ದೇಶ ಪ್ರಧಾನಿ ಜೊತೆಗಿರುವಾಗ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಖರ್ಗೆ ಅವರ ಹೇಳಿಕೆ ಭದ್ರತಾ ಪಡೆಗಳ ನೈತಿಕ ಖರ್ಗೆ ಕುಂದಿಸುವಂತಹದ್ದಾಗಿದೆ.ಬಾಬುಲಾಲ್ ಮರಂಡಿ, ಜಾರ್ಖಂಡ್ ಬಿಜೆಪಿ ಘಟಕದ ಅಧ್ಯಕ್ಷ
‘ಸಂಭಾವ್ಯ ದಾಳಿಯ ಬಗ್ಗೆ ಗುಪ್ತಚರ ಮಾಹಿತಿ ಪಡೆದ ನಂತರವೂ ಪಹಲ್ಗಾಮ್‌ನಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ಏಕೆ ನಿಯೋಜಿಸಿಲ್ಲ?’ ಎಂದು ಕೇಳಿದ್ದಾರೆ.
ಇದೇ ವೇಳೆ, ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ಕೇಂದ್ರ ಸರ್ಕಾರವು ಯಾವುದೇ ಕ್ರಮ ತೆಗೆದುಕೊಂಡರೂ ಅದನ್ನು ಕಾಂಗ್ರೆಸ್ ಬೆಂಬಲಿಸುತ್ತದೆ. ಪಕ್ಷಕ್ಕಿಂತ ದೇಶ ಮೊದಲು ಎಂದು ಹೇಳಿದ್ದಾರೆ.
ದೇಶ ದುರ್ಬಲಗೊಳಿಸುವ ಹೇಳಿಕೆ: ಬಿಜೆಪಿ ಟೀಕೆ
ನವದೆಹಲಿ: ‘ಪ್ರಧಾನಿ ಅವರ ಕಾಶ್ಮೀರ ಪ್ರವಾಸ ರದ್ದು ಮತ್ತು ಪಹಲ್ಗಾಮ್ ಕೃತ್ಯ ಕುರಿತು ಖರ್ಗೆ ಅವರು ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದು ಈ ಮೂಲಕ ದೇಶವನ್ನು ದುರ್ಬಲಗೊಳಿಸುತ್ತಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.
‘ಒಂದು ಕಡೆ ಸರ್ವಪಕ್ಷಗಳ ಸಭೆಯಲ್ಲಿ ದೇಶದ ಪರ ಇಒಗ್ಗಟ್ಟಾಗಿದ್ದೇವೆ ಎನ್ನುತ್ತಾರೆ. ಇನ್ನೊಂದೆಡೆ ಪಾಕಿಸ್ತಾನದ ಜೊತೆ ವಿಷಮ ಸ್ಥಿತಿ ಮೂಡುತ್ತಿರುವಾಗಿ ಹೀಗೆ ಹೇಳಿಕೆ ನೀಡುತ್ತಾರೆ’ ಎಂದು ಬಿಜೆಪಿ ನಾಯಕ ರವಿಶಂಕರ ಪ್ರಸಾದ್ ಹೇಳಿದರು.
ಇಂತಹ ಹೇಳಿಕೆ ಮೂಲಕ ಖರ್ಗೆ ಅವರೂ ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ವಿವಾದಿತ ಹೇಳಿಕೆ ನೀಡುವ ಪಕ್ಷದ ಬ್ರಿಗೇಡ್ ಜೊತೆಗೆ ಸೇರಿಕೊಂಡಿದ್ದಾರೆ ಎಂದು ಆರೋಪಿಸಿದರು.
ಬಿಗುವಿನ ಸ್ಥಿತಿ ಮೂಡುತ್ತಿರುವಾಗ ದೇಶ ಒಗ್ಗಟ್ಟಾಗಿ ನಿಂತಿದೆ. ದೇಶವ್ಯಾಪಿ ಅಣಕು ತಾಲೀಮಿಗೆ ಸಿದ್ಧತೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಖರ್ಗೆ ಅವರ ಈ ಹೇಳಿಕೆ ನೋವು ಮೂಡಿಸುವಂತಹದ್ದು ದುರದೃಷ್ಟಕರ ಎಂದು ಹೇಳಿದರು.
ವಿವಾದಿತ ಹೇಳಿಕೆಗಳನ್ನು ನೀಡದಂತೆ ಪಕ್ಷದವರನ್ನು ಖರ್ಗೆ ತಡೆಯಬೇಕಿತ್ತು. ಆದರೆ ಬದಲಾಗಿ ಅವರು ಈ ಗುಂಪು ಸೇರಿಕೊಂಡಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.