ನವದೆಹಲಿ: 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಗೆ ಇಂದು ಮತದಾನ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಮತದಾನ ಮಾಡುವವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.
ಜತೆಗೆ 90 ಸದಸ್ಯ ಬಲದ ಛತ್ತೀಸಗಢ ವಿಧಾನಸಭೆಯ 70 ಸ್ಥಾನಗಳಿಗೆ ನಡೆಯುತ್ತಿರುವ 2ನೇ ಹಂತದ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಆಗಮಿಸಿ ತಮ್ಮ ಹಕ್ಕು ಚಲಾಯಿಸುವಂತೆ ಅವರು ಮನವಿ ಮಾಡಿದ್ದಾರೆ.
'ಪ್ರಜಾಪ್ರಭುತ್ವದ ಈ ಮಹತ್ವದ ಹಬ್ಬವನ್ನು ಆಚರಿಸಲು ರಾಜ್ಯದ ಪ್ರತಿಯೊಂದು ಪ್ರದೇಶದಿಂದ (ಮಧ್ಯಪ್ರದೇಶ) ಮತದಾರರು ಉತ್ಸಾಹದಿಂದ ಬಂದು ಮತ ಚಲಾಯಿಸುತ್ತಾರೆ. ಈ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ರಾಜ್ಯದ ಎಲ್ಲಾ ಯುವ ಮತದಾರರಿಗೆ ನನ್ನ ಶುಭಾಶಯಗಳು' ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಇಂದು ಛತ್ತೀಸಗಢ ವಿಧಾನಸಭೆಗೆ ಎರಡನೇ ಮತ್ತು ಕೊನೆಯ ಸುತ್ತಿನ ಮತದಾನ ನಡೆಯುತ್ತಿದೆ. ಎಲ್ಲಾ ಮತದಾರರು ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸುವಂತೆ ನಾನು ವಿನಂತಿಸುತ್ತೇನೆ. ನಮ್ಮ ಪ್ರಜಾಪ್ರಭುತ್ವ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಎತ್ತಿಹಿಡಿಯಲು ನಿಮ್ಮ ಪ್ರತಿಯೊಂದು ಮತವೂ ಅಮೂಲ್ಯ' ಎಂದು ಪ್ರಧಾನಿ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಛತ್ತೀಸಗಢದಲ್ಲಿ ಎರಡನೇ ಹಂತದ ಮತದಾನ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿದೆ. ಬಿಂದ್ರನವಗಢ ವಿಧಾನಸಭಾ ಕ್ಷೇತ್ರದ 9 ಮತಗಟ್ಟೆಗಳಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮತದಾನ ನಡೆಯಲಿದೆ.
ಛತ್ತೀಸಗಢದಲ್ಲಿ ಎರಡನೇ ಹಂತದ ಮತದಾನಕ್ಕಾಗಿ 18,800ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 70 ಕ್ಷೇತ್ರಗಳಲ್ಲಿ ಒಟ್ಟು 958 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಧ್ಯಪ್ರದೇಶದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.