ನವದೆಹಲಿ: ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ರಾಜ್ಯಗಳ ರಚನಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಶುಭಾಶಯ ಕೋರಿದ್ದಾರೆ. ಈ ವೇಳೆ ಅವರು, ಈ ಎರಡೂ ರಾಜ್ಯಗಳ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
1987ರ ಫೆಬ್ರುವರಿ 21ರಂದು ಈ ಎರಡೂ ಪ್ರದೇಶಗಳಿಗೆ ರಾಜ್ಯದ ಸ್ಥಾನಮಾನ ದೊರೆಯಿತು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘ಅರುಣಾಚಲ ಪ್ರದೇಶದ ಜನರಿಗೆ ರಾಜ್ಯ ರಚನಾ ದಿನದ ಸಂದರ್ಭದಲ್ಲಿ ಶುಭ ಕೋರುತ್ತೇನೆ. ಈ ರಾಜ್ಯವು ಸಂಸ್ಕೃತಿ, ಧೈರ್ಯ ಮತ್ತು ದೇಶದ ಅಭಿವೃದ್ಧಿಯ ಮೇಲಿನ ಬದ್ಧತೆಗೆ ಹೆಸರುವಾಸಿಯಾಗಿದೆ. ಅರುಣಾಚಲ ಪ್ರದೇಶ ಪ್ರಗತಿಯ ನೂತನ ಶಿಖರವನ್ನೇರಲಿ’ ಎಂದು ಹಾರೈಸಿದ್ದಾರೆ.
ಅರುಣಾಚಲ ಪ್ರದೇಶದೊಂದಿಗೆ ತನ್ನ ರಾಜ್ಯ ರಚನಾ ದಿನ ಸಂಭ್ರಮಿಸುತ್ತಿರುವ ಮಿಜೋರಾಂಗೂ ಪ್ರಧಾನಿ ಶುಭ ಕೋರಿದ್ದಾರೆ.
‘ನಮ್ಮ ದೇಶ ಮಿಜೋರಾಂನ ಶ್ರೇಷ್ಠ ಸಂಸ್ಕೃತಿಯನ್ನು ಗೌರವಿಸುತ್ತದೆ. ಮಿಜೋರಾಂ ಜನರುಕರುಣೆಯ ಮನೋಭಾವ ಮತ್ತು ಪ್ರಕೃತಿಯೊಂದಿಗಿನ ತಮ್ಮ ಸರಳ ಜೀವನ ಶೈಲಿಗಾಗಿ ಗುರುತಿಸಿಕೊಂಡಿದ್ದಾರೆ. ನಾನು ಈ ರಾಜ್ಯದ ಅಭಿವೃದ್ಧಿಗಾಗಿ ಸದಾ ಪ್ರಾರ್ಥಿಸುತ್ತೇನೆ’ ಎಂದು ಟ್ವಿಟರ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.