ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಹಾಗೂ ಪ್ರಧಾನಿ ಮೋದಿ
(ಪಿಟಿಐ ಚಿತ್ರ)
ನವದೆಹಲಿ: ಭಾರತ ಮತ್ತು ಶ್ರೀಲಂಕಾ ಶೀಘ್ರದಲ್ಲೇ ರಕ್ಷಣಾ ಸಹಕಾರ ಒಪ್ಪಂದವನ್ನು ಕೈಗೊಳ್ಳಲಿದ್ದು, ವಿದ್ಯುತ್ ಗ್ರಿಡ್ ಸಂಪರ್ಕ ಮತ್ತು ಬಹು-ಉತ್ಪನ್ನ ಪೆಟ್ರೋಲಿಯಂ ಪೈಪ್‌ಲೈನ್‌ಗಳನ್ನು ಸ್ಥಾಪಿಸುವ ಮೂಲಕ ಇಂಧನ ಸಂಬಂಧಿತ ಸಹಕಾರ ಹೆಚ್ಚಿಸಿಕೊಳ್ಳಲು ನಿರ್ಧರಿಸಿವೆ.
ಭಾರತವು ಶ್ರೀಲಂಕಾದ ಸೇನೆಗೆ ಅಗತ್ಯವಿರುವ ಸಾಧನಗಳನ್ನು (ಹಾರ್ಡ್‌ವೇರ್) ಪೂರೈಸಲಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ನಡುವೆ ಸೋಮವಾರ ನಡೆದ ಮಾತುಕತೆ ಬಳಿಕ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಭಾರತ-ಶ್ರೀಲಂಕಾ ನಡುವೆ ಹೂಡಿಕೆ ಆಧಾರಿತ ಪ್ರಗತಿ ಮತ್ತು ಸಂಪರ್ಕ ಸೌಲಭ್ಯ ಹೆಚ್ಚಿಸಲು ನಿರ್ಧರಿಸಲಾಗಿದೆ. ಸಹಕಾರದ ಪ್ರಮುಖ ಆಧಾರ ಸ್ತಂಭಗಳಾಗಿ ಭೌತಿಕ, ಡಿಜಿಟಲ್ ಮತ್ತು ಇಂಧನ ಸಂಪರ್ಕಗಳನ್ನು ಪರಿಗಣಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
‘ಭಾರತದ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವಂತಹ ಅಥವಾ ಪ್ರಾದೇಶಿಕವಾಗಿ ಆತಂಕ ಉಂಟುಮಾಡುವಂತಹ ಯಾವುದೇ ಚಟುವಟಿಕೆಯನ್ನು ತನ್ನ ಗಡಿಯೊಳಗೆ ನಡೆಯಲು ಬಿಡುವುದಿಲ್ಲ’ ಎಂದು ದಿಸ್ಸನಾಯಕೆ ಭರವಸೆ ನೀಡಿದರು.
ಚೀನಾ ದೇಶವು ಭಾರತದ ವಿರುದ್ಧ ಯಾವುದೇ ಪಿತೂರಿ ನಡೆಸದೇ ಇರುವ ಕ್ರಮ ಇದಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ವಿದ್ಯುತ್ ಗ್ರಿಡ್ ಸಂಪರ್ಕ ಮತ್ತು ಬಹುಉತ್ಪನ್ನ ಪೆಟ್ರೋಲಿಯಂ ಪೈಪ್‌ಲೈನ್‌ಗಳನ್ನು ಸ್ಥಾಪಿಸಲಾಗುವುದು. ಶ್ರೀಲಂಕಾದ ವಿದ್ಯುತ್ ಘಟಕಗಳಿಗೆ ಭಾರತವು ದ್ರವೀಕೃತ ನೈಸರ್ಗಿಕ ಅನಿಲವನ್ನು ಪೂರೈಕೆ ಮಾಡಲಿದೆ ಎಂದು ಮೋದಿ ತಿಳಿಸಿದ್ದಾರೆ.
ಎರಡೂ ರಾಷ್ಟ್ರಗಳ ನಡುವೆ ಸಂಪರ್ಕ ಸೌಲಭ್ಯ ಹೆಚ್ಚಿಸಲು ರಾಮೇಶ್ವರ ಮತ್ತು ತಲೈಮನಾರ್ ನಡುವೆ ದೋಣಿ ಸೇವೆ ಪ್ರಾರಂಭಿಸಲಾಗುವುದು. ಶೀಘ್ರವೇ ರಕ್ಷಣಾ ಒಪ್ಪಂದ ನಿರ್ಧರಿಸಲಾಗುವುದು. ಹೈಡ್ರೋಗ್ರಫಿ (ಸಮುದ್ರಯಾನ ಮಾರ್ಗದರ್ಶಿ) ಸಹಕಾರಕ್ಕಾಗಿಯೂ ಒಪ್ಪಂದ ನಡೆದಿದೆ ಎಂದು ಮೋದಿ ಹೇಳಿದರು.
‘ಮೀನುಗಾರರು ಶ್ರೀಲಂಕಾದ ವ್ಯಾಪ್ತಿ ತಲುಪಿದಾಗ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಈ ವಿಷಯದಲ್ಲಿ ಮಾನವೀಯ ಧೋರಣೆಯೊಂದಿಗೆ ಮುಂದುವರಿಯಲು ಸಹ ನಾವು ಒಪ್ಪಿದ್ದೇವೆ’ ಎಂದು ಮೋದಿ ಹೇಳಿದರು.
ಶ್ರೀಲಂಕಾ ಸರ್ಕಾರವು ತಮಿಳರ ಆಕಾಂಕ್ಷೆಗಳನ್ನು ಈಡೇರಿಸುವ ನಿರೀಕ್ಷೆಯಿದೆ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.