ADVERTISEMENT

‘ಎ.ಐ ಇಂಪ್ಯಾಕ್ಟ್‌ ಶೃಂಗ–2026’: ಪ್ರಧಾನಿಯಿಂದ ಗುರುವಾರ ಉದ್ಘಾಟನೆ

ಎ.ಐ ಶೃಂಗ: ಮ್ಯಾಕ್ರನ್‌, ಗುಟೆರಸ್‌ ಸೇರಿದಂತೆ ಹಲವರು ಭಾಗಿ

ಪಿಟಿಐ
Published 18 ಫೆಬ್ರುವರಿ 2026, 16:23 IST
Last Updated 18 ಫೆಬ್ರುವರಿ 2026, 16:23 IST
<div class="paragraphs"><p>ಎ.ಐ</p></div>

ಎ.ಐ

   

– ಗೆಟ್ಟಿ ಚಿತ್ರ

ನವದೆಹಲಿ: ಕೃತಕ ಬುದ್ಧಿಮತ್ತೆ (ಎ.ಐ) ಕ್ಷೇತ್ರದಲ್ಲಿ ಭಾರತವನ್ನು ಮುಂಚೂಣಿಯ ಸ್ಥಾನದಲ್ಲಿ ನಿಲ್ಲಿಸುವ ಗುರಿ ಹೊಂದಿರುವ ‘ಎ.ಐ ಇಂಪ್ಯಾಕ್ಟ್‌ ಶೃಂಗ–2026’ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉದ್ಘಾಟಿಸಲಿದ್ದಾರೆ.

ADVERTISEMENT

‘ಭಾರತ ಮಂಟಪ’ದಲ್ಲಿ ಆಯೋಜನೆಯಾಗಿರುವ ಈ ಶೃಂಗಕ್ಕೆ ಬರುವ ವಿವಿಧ ದೇಶಗಳ ನಾಯಕರನ್ನು ಪ್ರಧಾನಿ ಅವರು ಸ್ವಾಗತಿಸಲಿದ್ದಾರೆ ಎಂದು ಪ್ರಧಾನಿ ಕಚೇರಿಯು ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.

ಶೃಂಗದ ಅಂಗವಾಗಿ ಆಯೋಜಿಸಿರುವ ‘ಎಕ್ಸ್‌ಪೋ’ಗೆ ಪ್ರಧಾನಿ ಅವರು ಸೋಮವಾರ ಚಾಲನೆ ನೀಡಿದ್ದರು. ಕಳೆದ ಎರಡು ದಿನಗಳಲ್ಲಿ ವಿವಿಧ ಗೋಷ್ಠಿಗಳು ನಡೆದಿದ್ದವು. 

ಪ್ರಧಾನಿ ಮೋದಿ ಅಲ್ಲದೆ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರನ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ಸೇರಿದಂತೆ ಹಲವು ನಾಯಕರು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಲಿದ್ದಾರೆ ಎಂದು ಪ್ರಕಟಣೆ ಹೇಳಿದೆ.

ಉದ್ಘಾಟನಾ ಸಮಾರಂಭದ ಬಳಿಕ ಪ್ರಧಾನಿ ಅವರು ಇತರ ನಾಯಕರೊಂದಿಗೆ ‘ಎ.ಐ ಇಂಪ್ಯಾಕ್ಟ್‌ ಎಕ್ಸ್‌ಪೋ’ಗೆ ಭೇಟಿ ನೀಡಲಿದ್ದು, ಅಲ್ಲಿ ವಿವಿಧ ದೇಶಗಳ ಪೆವಿಲಿಯನ್‌ಗೆ ತೆರಳಿ ಎ.ಐ ತಂತ್ರಜ್ಞಾನದ ಹೊಸ ಆವಿಷ್ಕಾರಗಳನ್ನು ವೀಕ್ಷಿಸಲಿದ್ದಾರೆ.

ಅನಂತರ ಮಧ್ಯಾಹ್ನ 12ರ ಸುಮಾರಿಗೆ ನಡೆಯಲಿರುವ ‘ನಾಯಕರ ಅಧಿವೇಶನ’ದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಡಳಿತ, ಮೂಲಸೌಕರ್ಯ ಮತ್ತು ಅಂತರರಾಷ್ಟ್ರೀಯ ಸಹಕಾರ ಸೇರಿದಂತೆ ಎ.ಐ ಕುರಿತು ರಾಷ್ಟ್ರೀಯ ಮತ್ತು ಜಾಗತಿಕ ಆದ್ಯತೆಗಳನ್ನು ರೂಪಿಸಲು ನಡೆಯುವ ಚರ್ಚೆಯಲ್ಲಿ ವಿವಿಧ ದೇಶಗಳ ನಾಯಕರು ಮತ್ತು ಸಚಿವರು ಭಾಗವಹಿಸುವರು.

ಸಂಜೆ 5.30ಕ್ಕೆ ಸಿಇಒಗಳ ದುಂಡುಮೇಜಿನ ಸಭೆಯಲ್ಲೂ ಪ್ರಧಾನಿ ಭಾಗವಹಿಸುವರು. ಹೂಡಿಕೆ, ಸಂಶೋಧನೆಯಲ್ಲಿ ಸಹಕಾರ ಮತ್ತು ಎ.ಐ ವ್ಯವಸ್ಥೆಗಳ ನಿಯೋಜನೆಗೆ ಸಂಬಂಧಿಸಿದ ಚರ್ಚೆಯಲ್ಲಿ ಜಾಗತಿಕ ತಂತ್ರಜ್ಞಾನ ಮತ್ತು ಉದ್ಯಮ ಸಂಸ್ಥೆಗಳ ಸಿಇಒಗಳು ಪಾಲ್ಗೊಳ್ಳುವರು. ಪ್ರಧಾನಿ ಅವರು ಇದೇ ವೇಳೆ ವಿವಿಧ ದೇಶಗಳ ನಾಯಕರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.