ಚುನಾವಣಾ ಆಯೋಗ
ನವದೆಹಲಿ: ಭಾರತದ ಮುಖ್ಯ ಚುನಾವಣಾ ಆಯುಕ್ತರ ಆಯ್ಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯು ಹೆಸರು ಅಂತಿಮಗೊಳಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಿದೆ ಎಂದು ಮೂಲಗಳು ಸೋಮವಾರ ಖಚಿತಪಡಿಸಿವೆ.
ಸಮಿತಿಯಲ್ಲಿ ಪ್ರಧಾನಿ ಅವರೊಂದಿಗೆ ಗೃಹ ಸಚಿವ ಅಮಿತ್ ಶಾ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಸಂಜೆ ಸಭೆ ನಡೆಸಿ ಹೆಸರು ಅಂತಿಮಗೊಳಿಸಿದ್ದಾರೆ. ಹಾಲಿ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಮಂಗಳವಾರ 65 ವರ್ಷ ಪೂರ್ಣಗೊಳ್ಳಲಿವೆ. ಇದರ ಬೆನ್ನಲ್ಲೇ ಆಯ್ಕೆ ಸಮಿತಿ ಸಭೆ ನಡೆಸಿದೆ.
ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಸಮಿತಿಯ ವಿಷಯವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಫೆ. 19ರಂದು ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೂ ಸಭೆ ಮುಂದೂಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತ್ತು. ಈ ವಿಷಯವನ್ನು ತ್ರಿಸದಸ್ಯ ಸಮಿತಿ ಸಭೆಯ ನಂತರ ಕಾಂಗ್ರೆಸ್ ಹೇಳಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ, ‘ಸಮಿತಿಯಿಂದ ಸುಪ್ರೀಂ ಕೊರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರನ್ನು ತೆಗೆದಿರುವುದರಿಂದ, ಚುನಾವಣಾ ಆಯೋಗದ ಮೇಲೆ ಸರ್ಕಾರ ತನ್ನ ಸ್ಪಷ್ಟ ಹಿಡಿತ ಸಾಧಿಸುವ ಗುರಿ ಸಾಧಿಸುವ ಗುಪ್ತ ಕಾರ್ಯಸೂಚಿ ಹೊಂದಿರುವುದು ಸ್ಪಷ್ಟವಾಗಿದೆ’ ಎಂದು ಆರೋಪಿಸಿದರು.
‘ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ವಿಷಯ ಕುರಿತ ಪ್ರಕರಣದ ವಿಚಾರಣೆಗೆ ಫೆ. 19 ದಿನಾಂಕ ನಿಗದಿಯಾಗಿದೆ. ಇದಕ್ಕೆ ಕೇವಲ 48 ಗಂಟೆಗಳು ಬಾಕಿ ಇವೆ. ಅಷ್ಟೊಂದು ತುರ್ತು ಇದ್ದರೆ ವಿಚಾರಣೆಯನ್ನು ತುರ್ತಾಗಿ ನಡೆಸುವಂತೆ ಸುಪ್ರೀಂ ಕೋರ್ಟ್ ಅನ್ನು ಕೇಂದ್ರ ಕೋರಬಹುದಿತ್ತು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.