ADVERTISEMENT

ಲಖನೌ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮೋದಿ ಸ್ಪರ್ಧೆ: ಆದರೆ...

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 1:47 IST
Last Updated 13 ಏಪ್ರಿಲ್ 2019, 1:47 IST
ಪ್ರಧಾನಿ ನರೇಂದ್ರ ಮೋದಿ ಅವರಂತೆಯೇ ಕಾಣುವ ಅಭಿನಂದನ್‌ ಪಟಾಕ್‌
ಪ್ರಧಾನಿ ನರೇಂದ್ರ ಮೋದಿ ಅವರಂತೆಯೇ ಕಾಣುವ ಅಭಿನಂದನ್‌ ಪಟಾಕ್‌    

ಲಖನೌ: ಉತ್ತರ ಪ್ರದೇಶದ ಲಖನೌ ಲೋಕಸಭೆ ಕ್ಷೇತ್ರದಿಂದ ಮೋದಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೆ, ಇವರು ಮೋದಿ ರೀತಿ ಕಾಣುವ ಅಭಿನಂದನ್‌ ಪಟಾಕ್‌. ಪ್ರಧಾನಿನರೇಂದ್ರ ಮೋದಿಯಲ್ಲ.

ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಅಭಿನಂದನ್‌ ಪಟಾಕ್‌, ‘ ನಾನು ವಾರಾಣಸಿಯಿಂದಲೂ ಸ್ಪರ್ಧೆ ಮಾಡುತ್ತಿದ್ದೇನೆ. ಇದೇ 26ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ. ನಾನು ದುರ್ಬಲ ಅಭ್ಯರ್ಥಿಯಲ್ಲ. ಯಾರ ವಿರೋಧಿಯೂ ಅಲ್ಲ. ಗೆದ್ದ ನಂತರ ರಾಹುಲ್‌ ಗಾಂಧಿ ಅವರು ಪ್ರಧಾನಿಯಾಗಲು ಬೆಂಬಲ ನೀಡುತ್ತೇನೆ,’ ಎಂದಿದ್ದಾರೆ.

ಅಭಿನಂದನ್‌ ಪಟಾಕ್‌ ಅವರು 2014ರ ಆರಂಭದಲ್ಲಿ ನರೇಂದ್ರ ಮೋದಿ ಅಭಿಮಾನಿಯಾಗಿದ್ದರು. ಎಲ್ಲೆಡೆ ಅವರನ್ನು ಬೆಂಬಲಿಸುತ್ತಿದ್ದರು. ಆದರೆ, ಇತ್ತೀಚೆಗೆ ಅವರು ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದಾರೆ. ರಾಹುಲ್‌ ಗಾಂಧಿ ಅವರ ಸಮ್ಮುಖದಲ್ಲೇ ಅವರು ಕಾಂಗ್ರೆಸ್‌ ಸೇರಿದ್ದಾರೆ.

ADVERTISEMENT

ಕಳೆದ ಕೆಲ ತಿಂಗಳ ಹಿಂದೆ ನಡೆದಿದ್ದ ಐದು ರಾಜ್ಯಗಳ ಉಪ ಚುನಾವಣೆ ವೇಳೆ ಅಭಿನಂದನ್‌ ಅವರು ಕಾಂಗ್ರೆಸ್‌ ಪರ ವ್ಯಾಪಕ ಪ್ರಚಾರ ಕೈಗೊಂಡಿದ್ದರು. ಸದ್ಯ ಲೋಕಸಭೆ ಚುನಾವಣೆ ಟಿಕೆಟ್‌ ಆಕಾಂಕ್ಷಿಯಾಗಿರುವ ಅವರಿಗೆ ಕಾಂಗ್ರೆಸ್‌ ನಿರಾಶೆಯುಂಟುಮಾಡಿದೆ. ಆದ್ದರಿಂದಲೇ ಅವರು ಲಖನೌದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಚುನಾವಣೆ ನಂತರ ಕಾಂಗ್ರೆಸ್‌ ಅನ್ನೇ ಬೆಂಬಲಿಸುವುದಾಗಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.