ನರೇಂದ್ರ ಮೋದಿ
(ಚಿತ್ರ ಕೃಪೆ: X/@narendramodi)
ನವದೆಹಲಿ: ‘ನಾನು ಕೂಡ ಮನುಷ್ಯ. ನಾನು ತಪ್ಪುಗಳನ್ನು ಮಾಡಬಹುದು. ಆದರೆ, ಕೆಟ್ಟ ಉದ್ದೇಶದಿಂದ ನಾನು ತಪ್ಪುಗಳನ್ನು ಮಾಡುವುದಿಲ್ಲ...’
ಜೆರೋಧಾ ಸಂಸ್ಥೆಯ ಸಹಸಂಸ್ಥಾಪಕ ನಿಖಿಲ್ ಕಾಮತ್ ಅವರು ನಡೆಸಿಕೊಡುವ ‘ಪೀಪಲ್ ಬೈ ಡಬ್ಲ್ಯುಟಿಎಫ್’ ಪಾಡ್‌ಕಾಸ್ಟ್ ಸರಣಿಯಲ್ಲಿ ಪಾಲ್ಗೊಂಡಿದ್ದ ಮೋದಿ, ಈ ಮಾತು ಹೇಳಿದ್ದಾರೆ.
ಇದು ಮೋದಿ ಅವರು ಪಾಲ್ಗೊಂಡಿದ್ದ ಮೊದಲ ಪಾಡ್‌ಕಾಸ್ಟ್ ಆಗಿದ್ದು, ಶುಕ್ರವಾರ ಬಿಡುಗಡೆ ಮಾಡಲಾಗಿದೆ.
ಕಳೆದ ವರ್ಷ ಲೋಕಸಭೆ ಚುನಾವಣೆ ವೇಳೆ,‘ನಾನು ಜೈವಿಕ ವ್ಯಕ್ತಿಯಲ್ಲ, ದೇವರೇ ನನ್ನನ್ನು ಕಳಿಸಿದ್ದಾನೆ’ ಎಂಬುದಾಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೋದಿ ಹೇಳಿದ್ದರು. ಈ ಮಾತಿಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಪಾಡ್‌ಕಾಸ್ಟ್‌ನಲ್ಲಿ ಈಗ ಈ ರೀತಿ ಹೇಳಿದ್ದಾರೆ. ಇದಕ್ಕೂ ಟೀಕೆಗಳು ವ್ಯಕ್ತವಾಗಿವೆ.
ತಮ್ಮ ಬಾಲ್ಯ, ಗುಜರಾತ್ ಮುಖ್ಯಮಂತ್ರಿ ಆದಾಗಿನಿಂದ ಹಿಡಿದು ಈಗಿನ ರಾಜಕಾರಣ, ಸಾಮಾಜಿಕ ಮಾಧ್ಯಮಗಳು, ಉದ್ಯಮಶೀಲತೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮೋದಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದೆ. ಜನರು ತಪ್ಪುಗಳನ್ನು ಮಾಡುತ್ತಾರೆ. ನಾನೂ ಮನುಷ್ಯ, ದೇವರಲ್ಲ. ಹೀಗಾಗಿ ನಾನು ಕೂಡ ತಪ್ಪುಗಳನ್ನು ಮಾಡುತ್ತೇನೆ ಎಂದು ಹೇಳಿದ್ದೆ’ ಎಂಬುದಾಗಿ ಮೋದಿ ಹೇಳಿದ್ದಾರೆ.
‘ನನ್ನ ಮಾತೃಭಾಷೆ ಹಿಂದಿಯಲ್ಲ. ನನ್ನಿಂದ ತಪ್ಪುಗಳಾಗಬಹುದು’ ಎನ್ನುವ ಮೂಲಕ ನಿಖಿಲ್ ಅವರು ಪಾಡ್‌ಕಾಸ್ಟ್ ಆರಂಭಿಸಿದ್ದರು.
‘ನಾನೂ ಸಹ ಹಿಂದಿ ಭಾಷಿಕನಲ್ಲ. ನಾವಿಬ್ಬರೂ ಹೀಗೇ ನಮ್ಮ ಮಾತುಕತೆ ಮುಂದುವರಿಸೋಣ’ ಎಂದು ಮುಗುಳ್ನಗುತ್ತಾ ಮೋದಿ ಹೇಳಿದ್ದಾರೆ.
‘ದೇಶ ಮೊದಲು’ ಎಂಬುದು ನನ್ನ ಸಿದ್ಧಾಂತ. ಹೊಸ ವಿಚಾರಗಳು ಈ ನನ್ನ ಸಿದ್ಧಾಂತಕ್ಕೆ ಹೊಂದಿಕೊಳ್ಳುವಂತೆ ಇರುವವರೆಗೆ ಅವುಗಳನ್ನು ನಾನು ಒಪ್ಪಿಕೊಳ್ಳುವೆ ಹಾಗೂ ಹಳೆಯ ವಿಚಾರಗಳನ್ನು ತ್ಯಜಿಸುವೆ’ ಎಂದು ಮೋದಿ ಹೇಳಿದ್ದಾರೆ.
ರಾಜಕಾರಣ ಕುರಿತು ಮಾತನಾಡಿದ ಮೋದಿ, ‘ಉತ್ತಮ ಜನರು ನಿರಂತರವಾಗಿ ರಾಜಕೀಯಕ್ಕೆ ಬರುವುದು ಅಗತ್ಯ. ಅದರಲ್ಲೂ, ತಮ್ಮ ಮಹತ್ವಾಕಾಂಕ್ಷೆಗಿಂತ ಜನಪರ ಕೆಲಸ ಮಾಡುವವರು ಬೇಕು. ಇದನ್ನೇ ನಾನು ನನ್ನ ‘ದೇಶ ಮೊದಲು’ ಸಿದ್ಧಾಂತ ಎಂದು ಕರೆಯುತ್ತೇನೆ’ ಎಂದಿದ್ದಾರೆ.
‘ನಿಮ್ಮ ದೃಷ್ಟಿಯಲ್ಲಿ, ಇಂತಹ ಸಾಮರ್ಥ್ಯವುಳ್ಳ ಯುವ ರಾಜಕಾರಣಿಗಳು ಇದ್ದಾರೆಯೇ’ ಎಂಬ ನಿಖಿಲ್ ಕಾಮತ್ ಪ್ರಶ್ನೆಗೆ, ‘ನನ್ನ ಬಳಿ ಅಂಥವರ ದೊಡ್ಡ ಪಟ್ಟಿಯೇ ಇದೆ. ಕೆಲವರ ಹೆಸರು ಹೇಳಿದರೆ, ಇತರರಿಗೆ ಅನ್ಯಾಯ ಮಾಡಿದಂತಾಗಲಿದೆ. ಹೀಗೆ ಮಾಡಬಾರದು. ಇದು ನನ್ನ ಜವಾಬ್ದಾರಿ’ ಎಂದು ಉತ್ತರಿಸಿದ್ದಾರೆ.
ಪ್ರಧಾನಿ ಮೋದಿ ಹೇಳಿದ್ದು
* ಉತ್ತಮ ರಾಜಕಾರಣಿ ಜನರಿಗಾಗಿ ಬದುಕಬೇಕು. ನಿಷ್ಠೆ ಬದ್ಧತೆ ಹೊಂದಿರಬೇಕು. ತಂಡದ ನಾಯಕನಾಗಿರಬೇಕು ಹಾಗೂ ಉತ್ತಮ ಸಂವಹನ ಕಲೆ ಮೈಗೂಡಿಸಿಕೊಂಡಿರಬೇಕು
* ಸ್ಥಳೀಯ ಶಾಲೆಯಲ್ಲಿಯೇ ಓದಿದ ಸಾಮಾನ್ಯ ವಿದ್ಯಾರ್ಥಿ ನಾನು. ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಈಜು ಇಷ್ಟವಾಗುತ್ತಿದ್ದವು. ಕುಟುಂಬದ ಸದಸ್ಯರ ಬಟ್ಟೆಗಳನ್ನೆಲ್ಲಾ ಒಗೆಯುತ್ತಿದ್ದೆ
* ಸಾಮಾಜಿಕ ಮಾಧ್ಯಮಗಳಲ್ಲಿ ‘ಟ್ರೋಲ್’ಗೆ ಒಳಗಾಗುವುದು ಪ್ರತಿಯೊಬ್ಬರ ಜೀವನದ ಭಾಗವೇ ಆಗಿದೆ. ಪ್ರಜಾಪ್ರಭುತ್ವ ಗಟ್ಟಿಗೊಳಿಸುವಲ್ಲಿ ಸಾಮಾಜಿಕ ಮಾಧ್ಯಮದ ಪಾತ್ರ ಮಹತ್ವದ್ದು
* ಒಬ್ಬ ವ್ಯಕ್ತಿಯಾಗಿ ಅಮೆರಿಕ್ಕೆ ಭೇಟಿ ನೀಡುವುದು ದೊಡ್ಡ ವಿಷಯವಲ್ಲ. ಅಮೆರಿಕ ವೀಸಾ ನಿರಾಕರಿಸಿದಾಗ ಒಂದು ಚುನಾಯಿತ ಸರ್ಕಾರ ಮತ್ತು ದೇಶಕ್ಕೆ ಅಗೌರವ ತೋರಲಾಗಿತ್ತು ಎಂಬ ಭಾವನೆ ಮೂಡಿತ್ತು.
* ಕೆಲ ರಾಜ್ಯಗಳ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಇದೆ. ವಿಧಾನಸಭೆ ಮತ್ತು ಲೋಕಸಭೆಯಲ್ಲಿಯೂ ಪ್ರಾತಿನಿಧ್ಯ ಪಡೆದುಕೊಳ್ಳಲು ಮಹಿಳೆಯರು ಶ್ರಮಿಸಬೇಕು
* ಚುನಾವಣೆಗಳ ಸಮಯದಲ್ಲಿ ರಾಜಕೀಯ ಭಾಷಣಗಳನ್ನು ಮಾಡಬೇಕು. ನನಗೆ ಇಷ್ಟವಿಲ್ಲದಿದ್ದರೂ ಇದನ್ನು ಮಾಡುವುದು ಕಡ್ಡಾಯ. ಚುನಾವಣೆಗಳು ಇಲ್ಲದಿದ್ದಾಗ ಆಡಳಿತದಲ್ಲಿ ಸಮಯ ಕಳೆಯುತ್ತೇನೆ. ಅಧಿಕಾರದಲ್ಲಿ ಇಲ್ಲದಿರುವಾಗ ಪಕ್ಷದ ಸಂಘಟನೆಗೆ ಗಮನ ಹರಿಸುತ್ತೇನೆ
* ಎಂದಿಗೂ ‘ಕಂಫರ್ಟ್ ಜೋನ್’ಗೆ ನನ್ನನ್ನು ಸೀಮಿತ ಮಾಡಿಕೊಂಡಿಲ್ಲ. ಅಪಾಯ ಎದುರಿಸಿ ಮುನ್ನುಗ್ಗುವ ನನ್ನ ಸಾಮರ್ಥ್ಯ ಕೂಡ ಪೂರ್ಣಪ್ರಮಾಣದಲ್ಲಿ ಬಳಕೆಯಾಗಿಲ್ಲ
* ಮೂರನೇ ಅವಧಿಯಲ್ಲಿ ನನ್ನ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿದೆ. ಕನಸುಗಳು ದೊಡ್ಡದಾಗಿವೆ. 2047ರ ವೇಳೆಗೆ ‘ವಿಕಸಿತ ಭಾರತ’ ಸಾಕಾರಗೊಳ್ಳಬೇಕು ಎಂಬುದೇ ನನ್ನ ಧ್ಯೇಯ
* ‘ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ’ ಎಂಬ ನನ್ನ ಮಾತನ್ನು ಕೆಲವರು ತಪ್ಪಾಗಿ ಅರ್ಥೈಸಿದರು. ಸಚಿವರು ನೌಕರರ ಸಂಖ್ಯೆ ಕಡಿಮೆ ಮಾಡುವುದು ಇದರ ಉದ್ದೇಶವಾಗಿರಲಿಲ್ಲ
ಜೆರೋಧಾ ಸಹಸಂಸ್ಥಾಪಕ ನಿಖಿಲ್ ಕಾಮತ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಪ್ರಧಾನಿ ಮೋದಿ ‘ನಾನು ಮನುಷ್ಯ; ನನ್ನಿಂದಲೂ ಪ್ರಮಾದಗಳಾಗುತ್ತವೆ’ ಎಂದಿದ್ದಾರೆ. ‘ಡ್ಯಾಮೇಜ್ ಕಂಟ್ರೋಲ್’ಗೆ ಹೀಗೆ ಹೇಳಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಕಾಂಗ್ರೆಸ್ ಶುಕ್ರವಾರ ಟೀಕಿಸಿದೆ. ‘ಎಂಟು ತಿಂಗಳ ಹಿಂದೆ ‘ನನ್ನನ್ನು ದೇವರೇ ಕಳುಹಿಸಿದ್ದಾನೆ’ ಎಂಬುದಾಗಿ ಹೇಳಿದ್ದ ವ್ಯಕ್ತಿಯಿಂದ ಇಂತಹ ಮಾತು ಬಂದಿದೆ. ಇದು ‘ಡ್ಯಾಮೇಜ್ ಕಂಟ್ರೋಲ್’ ಎಂಬುದು ಸ್ಪಷ್ಟ’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.