ADVERTISEMENT

ಬಾಂಗ್ಲಾದೇಶದ ಜೆಶೋರೇಶ್ವರಿ ಕಾಳಿ ದೇವಸ್ಥಾನದಲ್ಲಿ ‍ಪ್ರಾರ್ಥನೆ ಸಲ್ಲಿಸಿದ ಮೋದಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2021, 7:56 IST
Last Updated 27 ಮಾರ್ಚ್ 2021, 7:56 IST
ಬಾಂಗ್ಲಾದೇಶದ ಈಶ್ವರಿಪುರ ಗ್ರಾಮದಲ್ಲಿರುವ ಜೆಶೋರೇಶ್ವರಿ ಕಾಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ‍ಪ್ರಧಾನಿ ನರೇಂದ್ರ ಮೋದಿ                     –ಪಿಟಿಐ ಚಿತ್ರ
ಬಾಂಗ್ಲಾದೇಶದ ಈಶ್ವರಿಪುರ ಗ್ರಾಮದಲ್ಲಿರುವ ಜೆಶೋರೇಶ್ವರಿ ಕಾಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ‍ಪ್ರಧಾನಿ ನರೇಂದ್ರ ಮೋದಿ                     –ಪಿಟಿಐ ಚಿತ್ರ   

ಢಾಕಾ: ಬಾಂಗ್ಲಾದೇಶದ ಈಶ್ವರಿಪುರ ಗ್ರಾಮದಲ್ಲಿರುವ ಜೆಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.

ಜೆಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ಅವರನ್ನು ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಲಾಯಿತು.

‘ಜೆಶೋರೇಶ್ವರಿ ಕಾಳಿ ದೇವಾಲಯವು ಭಾರತ ಮತ್ತು ನೆರೆಯ ರಾಷ್ಟ್ರಗಳಲ್ಲಿರುವ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು 16 ನೇ ಶತಮಾನದಲ್ಲಿಹಿಂದೂ ರಾಜರೊಬ್ಬರು ನಿರ್ಮಿಸಿದ್ದರು’ ಎಂದು ಹಿಂದೂ ಪುರಾಣಗಳು ಹೇಳಿವೆ.

ADVERTISEMENT

‘ಪಶ್ಚಿಮ ಬಂಗಾಳದ ಗಡಿಯಲ್ಲಿರುವ ಜೆಶೋರೇಶ್ವರಿ ಕಾಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ದೇವಿಯ ಆರ್ಶೀವಾದ ಪಡೆದಿದ್ದೇನೆ’ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

‘ಕೈಯಲ್ಲಿ ತಯಾರಿಸಿದ ಮುಕುಟವನ್ನು ಕಾಳಿ ದೇವತೆಗೆ ಪ್ರಧಾನಿ ಅರ್ಪಿಸಿದರು. ಈ ಮುಕುಟವನ್ನು ಚಿನ್ನ ಮತ್ತು ಬೆಳ್ಳಿಯ ಲೇಪನದಿಂದ ಮಾಡಲಾಗಿದ್ದು, ಮೂರು ವಾರಗಳಲ್ಲಿ ಮುಕುಟವನ್ನು ಕುಶಲಕರ್ಮಿಗಳು ತಯಾರಿಸಿದ್ದಾರೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ ಅವರು ಟ್ವಿಟರ್‌ನಲ್ಲಿ ತಿಳಿಸಿದರು.

ದೇವಸ್ಥಾನಕ್ಕೆ ಹೊರಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಮೋದಿ ಅವರು,‘ಕೋವಿಡ್‌–19ನಿಂದ ಮನುಕುಲಕ್ಕೆ ಕಾಡುತ್ತಿರುವ ಕೋವಿಡ್‌–19 ಸೋಂಕನ್ನು ನಿರ್ಮೂಲನೆ ಮಾಡುವಂತೆ ದೇವಿಯಲ್ಲಿ ಪ್ರಾರ್ಥಿಸಿದ್ಧೇನೆ. ಬಾಂಗ್ಲಾದೇಶ ಮತ್ತು ಅದರ ಗಡಿ ಭಾಗದಲ್ಲಿರುವ ಪ್ರದೇಶಗಳಿಂದ ಹಲವಾರು ಭಕ್ತರು ‘ಮಾ ಕಾಳಿ ಮೇಳ’ಕ್ಕಾಗಿ ದೇವಸ್ಥಾನಕ್ಕೆ ಆಗಮಿಸುತ್ತಾರೆ. ದೊಡ್ಡ ಪ್ರಮಾಣದಲ್ಲಿ ಜನರು ಸೇರಲು ಸಭಾಂಗಣ ಇದ್ದರೆ ಉತ್ತಮವಾಗಿರುತ್ತದೆ. ಹಾಗಾಗಿ ಭಾರತ ಈ ಕಾಳಿ ದೇವಸ್ಥಾನಕ್ಕೆ ಸಭಾಂಗಣವನ್ನು ನಿರ್ಮಿಸಿ ಕೊಡಲಿದೆ’ ಎಂದರು.

2015ರಲ್ಲಿ ಮೋದಿ ಅವರು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದಾಗ, ಧಾಕೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.