ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಶುಕ್ರವಾರ ನಡೆದ ಬಿಮ್‌ಸ್ಟೆಕ್ 6ನೇ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ (ಎಡದಿಂದ ಮೊದಲನೇಯವರು), ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್, ಥಾಯ್ಲೆಂಡ್ ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವತ್ರಾ, ಪಾಲ್ಗೊಂಡರು
ಚಿತ್ರ: ಪ್ರಧಾನಿ ಕಚೇರಿ
ಬ್ಯಾಂಕಾಕ್: ಬಾಂಗ್ಲಾದೇಶದಲ್ಲಿನ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಭಾರತಕ್ಕಿರುವ ತೀವ್ರ ಕಳಕಳಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದ ಮಧ್ಯಂತರ ಸರ್ಕಾರದ ಸಲಹೆಗಾರ ಮುಹಮ್ಮದ್ ಯೂನುಸ್ ಅವರಿಗೆ ಶುಕ್ರವಾರ ತಿಳಿಸಿದ್ದಾರೆ.
ಇಲ್ಲಿ ಆಯೋಜಿಸಿದ್ದ ‘ಬಿಮ್‌ಸ್ಟೆಕ್‘ (ಬಿಐಎಂಎಸ್‌ಟಿಇಸಿ) ಗುಂಪಿನ ನಾಯಕರ ಶೃಂಗಸಭೆಯ ವೇಳೆ ಉಭಯ ನಾಯಕರು ಭೇಟಿಯಾದರು. ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಬಾಂಗ್ಲಾದೇಶದ ಸರ್ಕಾರ ಕೂಲಂಕಷವಾಗಿ ತನಿಖೆ ಮಾಡಲಿದೆ. ಆ ಮೂಲಕ ಅವರ ಭದ್ರತೆಯನ್ನು ಖಾತ್ರಿಪಡಿಸಲಿದೆ ಎಂಬ ನಿರೀಕ್ಷೆಯನ್ನು ಭಾರತ ಹೊಂದಿರುವುದಾಗಿ ಮೋದಿ ಅವರು ಯೂನುಸ್ ಅವರಿಗೆ ತಿಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಯೂನುಸ್ ಮತ್ತು ಮೋದಿ ಅವರ ಮೊದಲ ಭೇಟಿ ಇದಾಗಿದೆ.
ಉಭಯ ನಾಯಕರ ಸಭೆಯ ವಿವರ ನೀಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ‘ಪ್ರಜಾಸತ್ತಾತ್ಮಕ, ಸ್ಥಿರ, ಶಾಂತಿಯುತ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶಕ್ಕೆ ಭಾರತದ ಬೆಂಬಲ ಸದಾ ಇರುವುದೆಂದು ಪ್ರಧಾನಿ ಪುನರುಚ್ಚರಿಸಿದ್ದಾರೆ‘ ಎಂದು ಮಿಸ್ರಿ ಹೇಳಿದರು.
‘ಅಕ್ರಮವಾಗಿ ಗಡಿ ನುಸುಳುವಿಕೆ ತಡೆಯಲು ವಿಶೇಷವಾಗಿ ಗಡಿಯಲ್ಲಿ ಭದ್ರತೆ ಮತ್ತು ಸ್ಥಿರತೆ ಕಾಪಾಡಿಕೊಳ್ಳಬೇಕು ಎಂಬುದನ್ನು ಮೋದಿ ಅವರು ಯೂನುಸ್ ಅವರಿಗೆ ಒತ್ತಿ ಹೇಳಿದರು‘ ಎಂದು ಅವರು ತಿಳಿಸಿದರು.
ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಮೋದಿ ಅವರ ಬಳಿ ಯೂನುಸ್ ಪ್ರಸ್ತಾಪಿಸಿದ್ದಾರೆಯೇ ಎಂದು ಕೇಳಿದಾಗ, ಮಿಸ್ರಿ ನೇರ ಉತ್ತರ ನೀಡಲಿಲ್ಲ. ‘ಈಗ ಈ ವಿಷಯದ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಈ ಬಗ್ಗೆ ಬಾಂಗ್ಲಾದೇಶದಿಂದ ಮನವಿ ಸ್ವೀಕರಿಸಿರುವುದಾಗಿ ಸಚಿವಾಲಯವು ಈ ಹಿಂದೆಯೇ ಹೇಳಿದೆ’ ಎಂದರು.
* ಮುಕ್ತ, ಸ್ವತಂತ್ರ, ಸುರಕ್ಷಿತ ಮತ್ತು ಸಂರಕ್ಷಿತ ಹಿಂದೂ ಮಹಾಸಾಗರ ನಮ್ಮ ಆದ್ಯತೆಯಾಗಿದೆ
* ಬಿಮ್‌ಸ್ಟೆಕ್ ಗುಂಪಿನ ವ್ಯಾಪ್ತಿ ಮತ್ತು ಸಾಮರ್ಥ್ಯಗಳನ್ನು ನಿರಂತರ ವಿಸ್ತರಿಸುವ ಅಗತ್ಯವಿದೆ
* ಶುಕ್ರವಾರ ಸಹಿ ಹಾಕಲಾದ ಕಡಲ ಸಾರಿಗೆ ಒಪ್ಪಂದವು ವಾಣಿಜ್ಯ ಹಡಗು ಸಂಚಾರ ಮತ್ತು ಸರಕು ಸಾಗಣೆಯಲ್ಲಿ ಸಹಕಾರ ಬಲಪಡಿಸುತ್ತದೆ. ವ್ಯಾಪಾರಕ್ಕೆ ಚುರುಕು ನೀಡಲಿದೆ
* ಬಿಮ್‌ಸ್ಟೆಕ್ ಗುಂಪಿನ ರಾಷ್ಟ್ರಗಳ ಗೃಹ ಸಚಿವರ ಕಾರ್ಯವಿಧಾನದ ಸಾಂಸ್ಥೀಕರಣದ ಮೊದಲ ವಾರ್ಷಿಕ ಸಭೆಯನ್ನು ಇದೇ ವರ್ಷ ಭಾರತದಲ್ಲಿ ಆಯೋಜಿಸಲಾಗುವುದು
* ಭಾರತದಲ್ಲಿ ಸುಸ್ಥಿರ ಕಡಲ ಸಾರಿಗೆ ಕೇಂದ್ರವನ್ನು ಸ್ಥಾಪಿಸುವ ಪ್ರಸ್ತಾಪವಿದೆ
‘ಬಿಮ್‌ಸ್ಟೆಕ್’ ರಾಷ್ಟ್ರಗಳ ಯುಪಿಐ ಜತೆ ಜೋಡಣೆ: ಪ್ರಸ್ತಾವ ಮುಂದಿಟ್ಟ ಮೋದಿ ಬ್ಯಾಂಕಾಕ್: ಬಿಮ್‌ಸ್ಟೆಕ್ ಸದಸ್ಯ ರಾಷ್ಟ್ರಗಳ ಗುಂಪಿಗೆ ಹೊಸ ಹುರುಪು ನೀಡುವ ಪ್ರಯತ್ನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಯುಪಿಐ (ಏಕೀಕೃತ ಪಾವತಿ ವ್ಯವಸ್ಥೆ) ಅನ್ನು ಸದಸ್ಯ ರಾಷ್ಟ್ರಗಳ ಪಾವತಿ ವ್ಯವಸ್ಥೆಗಳೊಂದಿಗೆ ಜೋಡಿಸುವ ಪ್ರಸ್ತಾವ ಮುಂದಿಟ್ಟಿದ್ದಾರೆ. ಈ ಕ್ರಮವು ಬಂಗಾಳ ಕೊಲ್ಲಿ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಮತ್ತು ಪ್ರವಾಸೋದ್ಯಮದ ಬೆಳವಣಿಗೆಗೆ ಎಲ್ಲ ಹಂತಗಳಲ್ಲೂ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ. ಇಲ್ಲಿ ನಡೆಯುತ್ತಿರುವ ಬಿನ್‌ಸ್ಟೆಕ್ 6ನೇ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಅವರು ಬಿಮ್‌ಸ್ಟೆಕ್ ಚೇಂಬರ್ ಆಫ್ ಕಾಮರ್ಸ್ ಸ್ಥಾಪನೆ ವಾರ್ಷಿಕ ವ್ಯಾಪಾರ ಶೃಂಗಸಭೆಗಳ ಆಯೋಜನೆ ಮತ್ತು ಸದಸ್ಯ ರಾಷ್ಟ್ರಗಳ ನಡುವೆ ಸ್ಥಳೀಯ ಕರೆನ್ಸಿಗಳ ಮೂಲಕ ವ್ಯಾಪಾರ ವಹಿವಾಟು ಉತ್ತೇಜಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು. ಥಾಯ್ಲೆಂಡ್ ಆತಿಥ್ಯ ವಹಿಸಿರುವ ಈ ಶೃಂಗಸಭೆಯಲ್ಲಿ ಭಾರತ ಬಾಂಗ್ಲಾದೇಶ ನೇಪಾಳ ಮ್ಯಾನ್ಮಾರ್ ಶ್ರೀಲಂಕಾ ಮತ್ತು ಭೂತಾನ್ ನಾಯಕರು ಭಾಗವಹಿಸಿದ್ದಾರೆ. ಥಾಯ್ಲೆಂಡ್ ದೇಗುಲಕ್ಕೆ ಭೇಟಿ: ವಾಸ್ತುಶಿಲ್ಪಕ್ಕೆ ಪ್ರಸಿದ್ಧವಾದ ಬ್ಯಾಂಕಾಕ್‌ನ ವಾಟ್ ಫೋ ದೇವಾಲಯಕ್ಕೆ ಇದೇ ವೇಳೆ ಪ್ರಧಾನಿ ಮೋದಿ ಭೇಟಿ ನೀಡಿ 46 ಮೀಟರ್ ಉದ್ದದ ಮಲಗಿದ ಬುದ್ಧನ ಬೃಹತ್ ಪ್ರತಿಮೆಯ ದರ್ಶನ ಮಾಡಿದರು.
‘ಮ್ಯಾನ್ಮಾರ್‌ಗೆ ಹೆಚ್ಚಿನ ನೆರವು’ ‘ಇತ್ತೀಚೆಗೆ ಭೂಕಂಪದಿಂದ ನಲುಗಿದ ಮ್ಯಾನ್ಮಾರ್‌ಗೆ ಹೆಚ್ಚಿನ ನೆರವು ನೀಡಲು ಭಾರತ ಸಿದ್ಧವಿದೆ. ಹಾಗೆಯೇ ಆಂತರಿಕ ಸಂಘರ್ಷ ಪರಿಹರಿಸಲು ವಿಶ್ವಾಸಾರ್ಹ ಮತ್ತು ಎಲ್ಲರನ್ನು ಒಳಗೊಳ್ಳುವ ಚುನಾವಣೆಗಳಿಗೆ ಒತ್ತು ನೀಡಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮ್ಯಾನ್ಮಾರ್‌ನ ಸೇನಾ ಮುಖ್ಯಸ್ಥರಿಗೆ ಆಶ್ವಾಸನೆ ನೀಡಿದರು. ಶೃಂಗಸಭೆಯ ವೇಳೆ ಮ್ಯಾನ್ಮಾರ್ ಸೇನಾ ಸರ್ಕಾರದ ಮುಖ್ಯಸ್ಥ ಹಿರಿಯ ಜನರಲ್ ಮಿನ್ ಆಂಗ್ ಹ್ಲೈಂಗ್ ಅವರನ್ನು ಭೇಟಿಯಾದ ಮೋದಿ ‘ವಿಶ್ವಾಸಾರ್ಹ ಮತ್ತು ಎಲ್ಲರನ್ನು ಒಳಗೊಳ್ಳುವ ಚುನಾವಣೆಗಳ ಮೂಲಕ ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಶೀಘ್ರ ಮರುಸ್ಥಾಪಿಸುವ ಮಹತ್ವವನ್ನು ಒತ್ತಿಹೇಳಿದ್ದಾರೆ’ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ನೇಪಾಳ ಪ್ರಧಾನಿ ಜತೆಗೆ ಫಲಪ್ರದ ಮಾತುಕತೆ: ಮೋದಿ ಅವರು ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರನ್ನು ಭೇಟಿಯಾಗಿ ಶುಕ್ರವಾರ ಮಾತುಕತೆ ನಡೆಸಿದರು. ‘ನೆರೆಹೊರೆ ಮೊದಲು ನೀತಿ ಅಡಿಯಲ್ಲಿ ನೇಪಾಳವು ಭಾರತದ ಆದ್ಯತೆಯ ಪಾಲುದಾರ ರಾಷ್ಟ್ರವಾಗಿದೆ. ನಾವು ವಿಶೇಷವಾಗಿ ಇಂಧನ ಸಂಪರ್ಕ ಸಂಸ್ಕೃತಿ ಮತ್ತು ಡಿಜಿಟಲ್ ತಂತ್ರಜ್ಞಾನದಂತಹ ಕ್ಷೇತ್ರಗಳ ಕುರಿತು ಚರ್ಚಿಸಿದ್ದೇವೆ. ಸಭೆ ಫಲಪ್ರದವಾಗಿದೆ’ ಎಂದು ಮೋದಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.