ADVERTISEMENT

ಲಸಿಕೆ ಕುರಿತ ಅನುಮಾನ ನಿವಾರಣೆ ಪ್ರಯತ್ನ: ಆರೋಗ್ಯ ಕಾರ್ಯಕರ್ತರ ಅನುಭವ ಕೇಳಿದ ಮೋದಿ

ಪಿಟಿಐ
Published 22 ಜನವರಿ 2021, 10:59 IST
Last Updated 22 ಜನವರಿ 2021, 10:59 IST
ಕೋವಿಡ್‌ ಲಸಿಕೆ ಅಭಿಯಾನದ ಕುರಿತು ಮುಂಬೈನಲ್ಲಿ ಹಾಕಲಾಗಿದ್ದ ಮೋದಿ ಚಿತ್ರವುಳ್ಳ ಜಾಹೀರಾತು
ಕೋವಿಡ್‌ ಲಸಿಕೆ ಅಭಿಯಾನದ ಕುರಿತು ಮುಂಬೈನಲ್ಲಿ ಹಾಕಲಾಗಿದ್ದ ಮೋದಿ ಚಿತ್ರವುಳ್ಳ ಜಾಹೀರಾತು    

ವಾರಾಣಸಿ: ಸ್ವಕ್ಷೇತ್ರ ವಾರಾಣಸಿಯಲ್ಲಿ ಶುಕ್ರವಾರ ಆರೋಗ್ಯ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಕೋವಿಡ್ ಲಸಿಕೆಗಳ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯ ಬಗೆಗಿನ ಆತಂಕ, ತಪ್ಪು ಕಲ್ಪನೆಗಳನ್ನು ನಿವಾರಿಸುವ ಪ್ರಯತ್ನ ಮಾಡಿದ್ದಾರೆ.

'ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಲಸಿಕೆಗೆ ಕ್ಲೀನ್ ಚಿಟ್ ನೀಡಿದಾಗ, ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ಜನರಿಗೆ ಸಂದೇಶ ರವಾನೆಯಾಗುತ್ತದೆ,' ಎಂದು ಮೋದಿ ವಿಡಿಯೊ ಸಂವಾದದಲ್ಲಿ ಹೇಳಿದರು.

ಕೋವಿಡ್‌ ಲಸಿಕೆಯನ್ನು ತೆಗೆದುಕೊಂಡ ಆರೋಗ್ಯ ಕಾರ್ಯಕರ್ತರರು ಮತ್ತು ಇತರರು ಈ ಸಂವಾದದಲ್ಲಿ ಭಾಗವಹಿಸಿದ್ದರು. ಅವರು ಲಸಿಕೆ ಪಡೆದ ತಮ್ಮ ಅನುಭವಗಳನ್ನು ಹಂಚಿಕೊಂಡರು.

ADVERTISEMENT

'ಕೋವಿಡ್‌ ಲಸಿಕೆಯನ್ನು ಪಡೆದ ನಂತರ ತಮಗೆ ಯಾವುದೇ ಸಮಸ್ಯೆಯಾಗಿಲ್ಲ,' ಎಂದು ನರ್ಸ್‌ಗಳು, ಲ್ಯಾಬ್‌ ತಂತ್ರಜ್ಞರು, ವೈದ್ಯರು ಹೇಳಿದರು. ಆರೋಗ್ಯ ಕಾರ್ಯಕರ್ತರ ಈ ಅಭಿಪ್ರಾಯವನ್ನು ಮೋದಿ ಗೌರವಿಸಿದರು, ಶ್ಲಾಘಿಸಿದರು.

ಲಸಿಕೆ ಹಾಕಿಸಿಕೊಳ್ಳಲು ಅಧಿಕಾರಿಗಳು ಹಿಂಜರಿಯುತ್ತಿರುವ, ಅನೇಕ ಆರೋಗ್ಯ ಕಾರ್ಯಕರ್ತರು ತಮ್ಮ ನಿಯೋಜಿತ ಕೇಂದ್ರಗಳಲ್ಲಿ ಲಸಿಕೆ ಹಾಕಿಸಿಕೊಳ್ಳದ ಘಟನೆ ದೇಶದ ಅಲ್ಲಲ್ಲಿ ಕೇಳಿ ಬರುತ್ತಿದೆ. ಇದೇ ಹಿನ್ನೆಲೆಯಲ್ಲಿ ಮೋದಿ ಅವರು ಈ ಸಂವಾದದ ಮೂಲಕ ಅನುಮಾನಗಳನ್ನು ನಿವಾರಿಸುವ ಪ್ರಯತ್ನ ಮಾಡಿದರು.

ಲಸಿಕೆ ಕುರಿತ ಜನರ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಸ್ವತಃ ಪ್ರಧಾನಿ, ಮುಖ್ಯಮಂತ್ರಿಗಳು ಎರಡನೇ ಹಂತದ ಲಸಿಕೆ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.