ADVERTISEMENT

ಪಶ್ಚಿಮ ಬಂಗಾಳದಲ್ಲಿ ‘ಕ್ರೂರಿ ಸರ್ಕಾರ’: ಪ್ರಧಾನಿ ಮೋದಿ ಟೀಕೆ

ಪಿಟಿಐ
Published 29 ಮೇ 2025, 16:48 IST
Last Updated 29 ಮೇ 2025, 16:48 IST
ಪಶ್ಚಿಮ ಬಂಗಾಳದ ಅಲಿಪುರದ್ವಾರ್‌ನಲ್ಲಿ ಗುರುವಾರ ನಡೆದ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸೇರಿ ಹಲವರು ಪಾಲ್ಗೊಂಡಿದ್ದರು– ಪಿಟಿಐ
ಪಶ್ಚಿಮ ಬಂಗಾಳದ ಅಲಿಪುರದ್ವಾರ್‌ನಲ್ಲಿ ಗುರುವಾರ ನಡೆದ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸೇರಿ ಹಲವರು ಪಾಲ್ಗೊಂಡಿದ್ದರು– ಪಿಟಿಐ   

ಅಲಿಪುರದ್ವಾರ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಹಿಂಸಾಚಾರ, ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆಯ ಅಸ್ಥಿರತೆಯನ್ನು ಈ ಸರ್ಕಾರ ಪೋಷಿಸುತ್ತಿದೆ. ಇಂಥ ‘ಕ್ರೂರಿ ಸರ್ಕಾರ’ವನ್ನು ಕಿತ್ತೊಗೆಯಲು ಇಲ್ಲಿನ ಜನರು ಹಾತೊರೆಯುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಉತ್ತರ ಬಂಗಾಳದ ಅಲಿಪುರದ್ವಾರದಲ್ಲಿ ಸಾರ್ವಜನಿಕ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ, ಮುರ್ಷಿದಾಬಾದ್, ಮಾಲ್ಡಾ ಕೋಮು ಹಿಂಸಾಚಾರಗಳು ಟಿಎಂಸಿ ಅವಧಿಯ ‘ಕ್ರೌರ್ಯ ಮತ್ತು ಉದಾಸೀನತೆ’ಯನ್ನು ನೆನಪಿಸುತ್ತವೆ ಎಂದರು.

‘ಮಮತಾ ಬ್ಯಾನರ್ಜಿ ಅವರ ಓಲೈಕೆ ನೀತಿಯಿಂದಾಗಿಯೇ ಹಿಂಸಾಚಾರ ನಡೆದವು. ಆಡಳಿತ ಪಕ್ಷದ ಸದಸ್ಯರು ಗುರುತಿಸಿದ ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಪೊಲೀಸರು ಕ್ರಮ ಕೈಗೊಳ್ಳಲಾಗದೆ ಅಸಹಾಯಕರಾದರು’ ಎಂದು ಮೋದಿ ಆರೋಪಿಸಿದರು.

ADVERTISEMENT

ಮುರ್ಷಿದಾಬಾದ್ ಹಿಂಸಾಚಾರದ ನಂತರ ಇದೇ ಮೊದಲ ಬಾರಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಮೋದಿ, ಐದು ಪ್ರಮುಖ ಹಿಂಸಾಚಾರ ಪ್ರಕರಣಗಳನ್ನು ಉಲ್ಲೇಖಿಸಿದರು.

‘ಪಶ್ಚಿಮ ಬಂಗಾಳದ ಪ್ರತಿಯೊಂದು ಪ್ರಕರಣದಲ್ಲೂ ನ್ಯಾಯಾಲಯಗಳು ಮಧ್ಯಪ್ರವೇಶಿಸುತ್ತಿವೆ. ಇಲ್ಲದಿದ್ದರೆ ಈ ವಿಚಾರಗಳು ಇತ್ಯರ್ಥ ಆಗುತ್ತಿರಲಿಲ್ಲ. ಈ ಸರ್ಕಾರದ ಮೇಲೆ ಜನರಿಗೆ ನಂಬಿಕೆ ಇಲ್ಲ. ಬಂಗಾಳದಲ್ಲಿ ‘ಕ್ರೂರಿ ಸರ್ಕಾರವನ್ನು ತೊಲಗಿಸೋಣ’ ಎನ್ನುವ ಕೂಗು ಎದ್ದಿದೆ’ ಎಂದರು.

‘ಶಿಕ್ಷಕರ ನೇಮಕಾತಿಯಲ್ಲಿ ಆದ ಅಕ್ರಮವು ಸಾವಿರಾರು ಮಂದಿಯ ಜೀವನದಲ್ಲಿ ಆಟ ಆಡಿದೆ. ಇಡೀ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದೆ. ಸರ್ಕಾರ ತನ್ನ ತಪ್ಪು ತಿದ್ದಿಕೊಳ್ಳದೇ ನ್ಯಾಯಾಲಯಗಳನ್ನು ದೂಷಿಸುತ್ತಿದೆ’ ಎಂದು ಮೋದಿ ಟೀಕಿಸಿದರು.

ಮೋದಿ ಹೇಳಿದ ಪಶ್ಚಿಮ ಬಂಗಾಳದ ಐದು ಬಿಕ್ಕಟ್ಟುಗಳು:

– ವ್ಯಾಪಕ ಹಿಂಸಾಚಾರ, ಹದಗೆಟ್ಟ ಕಾನೂನು ಸುವ್ಯವಸ್ಥೆ

– ಹೆಣ್ಣುಮಕ್ಕಳಲ್ಲಿ ಹೆಚ್ಚುತ್ತಿರುವ ಅಸುರಕ್ಷತೆ ಆತಂಕ

– ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಿದ್ದು, ಯುವಕರಲ್ಲಿ ಅಸಹನೆ ಇದೆ

– ಭ್ರಷ್ಟಾಚಾರ ಇಡೀ ವ್ಯವಸ್ಥೆ ಹಾಳು ಮಾಡಿದೆ, ಸರ್ಕಾರದ ಮೇಲೆ ನಂಬಿಕೆ ಇಲ್ಲ

– ಆಡಳಿತ ಪಕ್ಷದ ಸ್ವಾರ್ಥ ಸೇವೆಯ ರಾಜಕಾರಣ

ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ
ರಾಜಕೀಯ ದಿವಾಳಿತನ ಇಷ್ಟರ ಮಟ್ಟಕ್ಕೆ ಹೋಗಬಾರದು. ಮಮತಾ ಬ್ಯಾನರ್ಜಿ ಆಪರೇಷನ್ ಸಿಂಧೂರ’ವನ್ನು ‘ಬ್ಯುಸಿನೆಸ್ ಆಫ್‌ ಸಿಂಧೂರ’ ಎಂದಿದ್ದಾರೆ. ಇದು ನಮ್ಮ ಸೇನೆಯ ತ್ಯಾಗ ದೇಶ ಭಕ್ತಿ ಮತ್ತು ಶೌರ್ಯವನ್ನು ಅಣಕಿಸುವ ಅವರ ನೈಜ ಮುಖ
– ಅಮಿತ್‌ ಮಾಳವೀಯ ಬಿಜೆಪಿ ನಾಯಕ

ರಾಜಕೀಯ ಲಾಭಕ್ಕೆ ‌‘ಆಪರೇಷನ್ ಸಿಂಧೂರ’ ಬಳಕೆ: ಮಮತಾ ಆರೋಪ

ಪ್ರಧಾನಿ ನರೇಂದ್ರ ಮೋದಿ ಅವರು ‘ಆಪರೇಷನ್ ಸಿಂಧೂರ’ವನ್ನು ರಾಜಕೀಯಗೊಳಿಸುತ್ತಿದ್ದಾರೆ. ಮುಂಬರುವ ರಾಜ್ಯಗಳ ಚುನಾವಣೆಗಳಲ್ಲಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಪ್ರಯತ್ನ ಇದು’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ರ್‍ಯಾಲಿ ನಡೆಸಿದ ಪ್ರಧಾನಿ ಮೋದಿ ಸಿಂಧೂರಕ್ಕೂ ಪಶ್ಚಿಮ ಬಂಗಾಳಕ್ಕೂ ಇರುವ ಪವಿತ್ರ ಸಂಬಂಧ ಉಲ್ಲೇಖಿಸಿದ್ದರು. ದುರ್ಗಾ ಪೂಜೆಯಲ್ಲಿ ಮಹಿಳೆಯರು ಆಚರಿಸುವ ‘ಸಿಂಧೂರ ಖೇಲಾ’ ಅನ್ನು ಉದಾಹರಣೆಯಾಗಿ ಬಳಸಿದ್ದರು. ಇದಕ್ಕೆ ಮಮತಾ ಬ್ಯಾನರ್ಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜಕೀಯ ಲಾಭ ಪಡೆಯುವ ಕಾರಣಕ್ಕಾಗಿಯೇ ಸೇನಾ ಕಾರ್ಯಾಚರಣೆಗೆ ‘ಆಪರೇಷನ್ ಸಿಂಧೂರ’ ಎನ್ನುವ ಹೆಸರು ಇಟ್ಟರು ಎಂದು ಮಮತಾ ಆರೋಪಿಸಿದ್ದಾರೆ.

‘ಭಯೋತ್ಪಾದನೆ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಇಡೀ ಜಗತ್ತಿಗೆ ತಿಳಿಸಲು ತೆರಳಿರುವ ಸರ್ವ ಪಕ್ಷ ನಿಯೋಗದಲ್ಲಿ ಟಿಎಂಸಿ ಭಾಗವಾಗಿದ್ದರೂ ಮೋದಿಯವರು ಬಂಗಾಳವನ್ನು ಟೀಕಿಸುತ್ತಿರುವುದು ನನಗೆ ಬೇಸರ ತಂದಿದೆ’ ಎಂದು ಮಮತಾ ಹೇಳಿದ್ದಾರೆ.

‘ಆಪರೇಷನ್ ಸಿಂಧೂರ ಮುಗಿದಿಲ್ಲ’

‘ಆಪರೇಷನ್ ಸಿಂಧೂರ’ ಇನ್ನೂ ಅಂತ್ಯಗೊಂಡಿಲ್ಲ. ಪಾಕಿಸ್ತಾನದ ನೆಲಕ್ಕೇ ನುಗ್ಗಿ ಮೂರು ಬಾರಿ ದಾಳಿ ಮಾಡಿದ್ದೇವೆ. ಯಾರು ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದ್ದಾರೋ ಅವರು ತಕ್ಕ ಬೆಲೆಯನ್ನು ತೆರಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಂಗಾಳದಲ್ಲಿ ಬೃಹತ್ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು ‘ನಾನು ಸಿಂಧೂರದ ಪವಿತ್ರ ಭೂಮಿಯಲ್ಲಿ ನಿಂತಿದ್ದೇನೆ. ನಾವಿಂದು ಭಯೋತ್ಪಾದನೆ ವಿರುದ್ಧ ಹೊಸ ಪರಿಹಾರ ಕಂಡುಕೊಂಡಿದ್ದೇವೆ. ಅದು ಆಪರೇಷನ್ ಸಿಂಧೂರ ಎಂದು ನಾನು ಹೇಳಬಲ್ಲೆ’ ಎಂದರು.

‘ಪಹಲ್ಗಾಮ್ ದಾಳಿ ದೇಶವನ್ನು ಕಲಕಿತ್ತು. ನಮ್ಮ ಸೋದರಿಯರ ಸಿಂಧೂರ ಅಳಿಸುವ ಮೊಂಡು ಧೈರ್ಯವನ್ನು ಭಯೋತ್ಪಾದಕರು ತೋರಿದ್ದರು. ನಮ್ಮ ಶೂರ ಯೋಧರು ಸಿಂಧೂರದ ಶಕ್ತಿಯನ್ನು ತೋರಿಸಿದ್ದಾರೆ. ಬಂಗಾಳದ ನೆಲದಿಂದ 140 ಕೋಟಿ ಭಾರತೀಯರಿಗೆ ಹೇಳುತ್ತಿದ್ದೇ...ನೆ ಆಪರೇಷನ್ ಸಿಂಧೂರು ಇನ್ನೂ ಮುಗಿದಿಲ್ಲ’ ಎಂದು ಮೋದಿ ಹೇಳಿದರು.

‘ಭಾರತದಲ್ಲಿ ಭಯೋತ್ಪಾದನೆ ನಡೆಸಿದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ‍ಪಾಕಿಸ್ತಾನಕ್ಕೆ ಮೂರು ಬಾರಿ ತೋರಿಸಿದ್ದೇವೆ. ನೇರ ಯುದ್ಧ ನಡೆದಾಗಲೆಲ್ಲಾ ಅವರು ಸೋತಿದ್ದಾರೆ. ಭಯೋತ್ಪಾದನೆ ಮತ್ತು ಸಾಮೂಹಿಕ ಕೊಲೆ ಪಾಕಿಸ್ತಾನ ಸೇನೆಯ ಪ್ರಯೋಗ ಎಂದು ಮೋದಿ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.