ADVERTISEMENT

ಪ್ರಧಾನಿಯಿಂದ 11 ದಿನಗಳ ಧಾರ್ಮಿಕ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 15:23 IST
Last Updated 12 ಜನವರಿ 2024, 15:23 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ನವದೆಹಲಿ: ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ದಿನ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 11 ದಿನಗಳ ವಿಶೇಷ ಧಾರ್ಮಿಕ ಅನುಷ್ಠಾನಗಳನ್ನು ಆರಂಭಿಸಿದ್ದಾರೆ. ಪ್ರಾಣ ಪ್ರತಿಷ್ಠಾಪನೆಯು ಜನವರಿ 22ರಂದು ನಡೆಯಲಿದೆ.

‘ನಾನು ಭಾವುಕನಾಗಿದ್ದೇನೆ. ಭಾವನೆಗಳಿಂದ ಪರವಶನಾಗಿದ್ದೇನೆ. ಇದೇ ಮೊದಲ ಬಾರಿಗೆ ನನ್ನ ಜೀವನದಲ್ಲಿ ಇಂತಹ ಅನುಭವ ಆಗುತ್ತಿದೆ’ ಎಂದು ಅವರು ಹೇಳಿದ್ದಾರೆ. ಹಲವು ತಲೆಮಾರುಗಳ ಜನರು ದೃಢನಿಶ್ಚಯದ ರೀತಿಯಲ್ಲಿ ತಮ್ಮ ಹೃದಯದಲ್ಲಿ ಇರಿಸಿಕೊಂಡಿದ್ದ ಕನಸೊಂದು ನನಸಾಗುವುದಕ್ಕೆ ತಾವು ಸಾಕ್ಷಿ ಆಗುತ್ತಿರುವುದಾಗಿ ಅವರು ಹೇಳಿದ್ದಾರೆ.

ADVERTISEMENT

ತಮ್ಮ ಅಂತರಂಗದ ಪಯಣವನ್ನು ಅನುಭವಿಸಬಹುದೇ ವಿನಾ ಅದನ್ನು ಅಭಿವ್ಯಕ್ತಿಸಲು ಆಗುವುದಿಲ್ಲ ಎಂದು ಮೋದಿ ಅವರು ಎಕ್ಸ್‌ ಖಾತೆಯ ಮೂಲಕ ಹಂಚಿಕೊಂಡಿರುವ ಧ್ವನಿ ಸಂದೇಶಲ್ಲಿ ಹೇಳಿದ್ದಾರೆ. ತಮ್ಮಲ್ಲಿನ ಭಾವನೆಗಳು ಅವೆಷ್ಟು ಗಾಢವಾಗಿವೆ, ತೀವ್ರವಾಗಿವೆ ಎಂಬುದನ್ನು ಮಾತುಗಳಲ್ಲಿ ಹೇಳಲು ಆಗದು ಎಂದಿದ್ದಾರೆ.

ಎಲ್ಲ ಭಾರತೀಯರಿಗೆ, ರಾಮನ ಭಕ್ತರಿಗೆ ಇದು ಪವಿತ್ರವಾದ ಸಂದರ್ಭ ಎಂದು ಮೋದಿ ಅವರು ಹೇಳಿದ್ದಾರೆ. ರಾಮಭಕ್ತರು ರಾಮನ ಜನ್ಮಸ್ಥಳ ಎಂದು ನಂಬಿರುವಲ್ಲಿ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನಡೆಯಲಿರುವ ಐತಿಹಾಸಿಕ ಸಂದರ್ಭಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಮಂಗಳಕರ ಸಂದರ್ಭದಲ್ಲಿ ತಾವು ಹಾಜರಿರಲಿರುವುದು ಸುದೈವದ ಸಂಗತಿ ಎಂದೂ ಅವರು ಹೇಳಿದ್ದಾರೆ.

ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಭಾರತೀಯರೆಲ್ಲರನ್ನು ಪ್ರತಿನಿಧಿಸಲು ದೇವರು ತಮ್ಮನ್ನು ಆಯ್ಕೆ ಮಾಡಿದ್ದಾನೆ, ಇದನ್ನು ಮನಸ್ಸಿನಲ್ಲಿ ಇರಿಸಿಕೊಂಡು 11 ದಿನಗಳ ವಿಶೇಷ ಧಾರ್ಮಿಕ ಅನುಷ್ಠಾನಕ್ಕೆ ಮುಂದಾಗುತ್ತಿರುವುದಾಗಿ ಹೇಳಿದ್ದಾರೆ. ‘ನಾನು ಜನರ ಆಶೀರ್ವಾದ ಕೋರುತ್ತಿದ್ದೇನೆ’ ಎಂದು ಎಕ್ಸ್‌ ವೇದಿಕೆಯಲ್ಲಿ ಮೋದಿ ಬರೆದಿದ್ದಾರೆ.

ಪ್ರಾಣ ಪ್ರತಿಷ್ಠಾಪನೆ ನಡೆಸುವವರು ಪಾಲಿಸಬೇಕಾದ ಕಠಿಣ ನಿಯಮಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ ಎಂದು ತಿಳಿಸಿರುವ ಮೋದಿ ಅವರು, ಅಧ್ಯಾತ್ಮದ ಹಾದಿಯಲ್ಲಿ ಸಾಗುತ್ತಿರುವ ಹಿರಿಯರಿಂದ ಪಡೆದ ಮಾರ್ಗದರ್ಶನದ ಅನುಸಾರವಾಗಿ ಈ ಅನುಷ್ಠಾನ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ರಾಮ ಕಾಲ ಕಳೆದಿದ್ದ ಎಂದು ನಂಬಲಾಗಿರುವ ಧಾಮ–ಪಂಚವಟಿಯಲ್ಲಿ ಈ ಅನುಷ್ಠಾನ ಆರಂಭಿಸಲಾಗುವುದು ಎಂದು ಮೋದಿ ಅವರು ತಿಳಿಸಿದ್ದಾರೆ. ಸ್ವಾಮಿ ವಿವೇಕಾನಂದರು ಒತ್ತಿಹೇಳಿದ್ದ ಆತ್ಮವಿಶ್ವಾಸವು ಇಂದು ಭವ್ಯ ರಾಮ ಮಂದಿರದ ರೂಪದಲ್ಲಿ ಕಾಣಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.