ಪೋರ್ಟ್ ಲೂಯಿಸ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾರಿಷಸ್‌ಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭದಲ್ಲಿ ಅವರು ಸಾಮರ್ಥ್ಯ ವೃದ್ಧಿಯಿಂದ ಹಿಡಿದು ಸಮುದಾಯ ಸಂಬಂಧಿತ ಮೂಲಸೌಕರ್ಯದವರೆಗೆ ಭಾರತ ಅನುದಾನಿತ 20ಕ್ಕೂ ಹೆಚ್ಚು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗ್ನೇಯ ಆಫ್ರಿಕಾದ ದ್ವೀಪ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಹೊಸ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಪ್ರಧಾನಿ ಘೋಷಿಸಲಿದ್ದಾರೆ.
ಪ್ರಧಾನಿ ಮೋದಿ, ಮಾರಿಷಸ್‌ನ ತಮ್ಮ ಪ್ರಧಾನಿ ನವೀನ್ ರಾಮ್‌ಗೂಲಮ್ ಅವರೊಂದಿಗೆ ನಾಗರಿಕ ಸೇವಾ ಕಾಲೇಜು ಕಟ್ಟಡವನ್ನು ಜಂಟಿಯಾಗಿ ಉದ್ಘಾಟಿಸಲಿದ್ದಾರೆ. ಕಟ್ಟಡದ ನಿರ್ಮಾಣವು ಅಂದಾಜು 4.75 ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚದಲ್ಲಿ ಪೂರ್ಣಗೊಂಡಿದೆ. ಈ ಯೋಜನೆಗಾಗಿ ಒಪ್ಪಂದಕ್ಕೆ 2017ರಲ್ಲಿ ಸಹಿ ಹಾಕಲಾಗಿತ್ತು.
ಮೋದಿ ಅವರು ಸುಮಾರು ₹7 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಪ್ರದೇಶ ಆರೋಗ್ಯ ಕೇಂದ್ರ ಮತ್ತು 20 ಸಮುದಾಯ ಯೋಜನೆಗಳನ್ನು ವರ್ಚುವಲ್ ಆಗಿ ಉದ್ಘಾಟಿಸಲಿದ್ದಾರೆ. ಈ ಸಮುದಾಯ ಯೋಜನೆಗಳಲ್ಲಿ ಕ್ರೀಡೆಗೆ ಸಂಬಂಧಿಸಿದ ಮೂಲಸೌಕರ್ಯವೂ ಸೇರಿದೆ.
'ಇವೆಲ್ಲ ಸಮುದಾಯ ಅಭಿವೃದ್ಧಿ ಯೋಜನೆಗಳಾಗಿದ್ದು, ಇವುಗಳನ್ನು ಕಡಿಮೆ ಅವಧಿಯಲ್ಲಿ ಬಹಳ ವೇಗವಾಗಿ ಕಾರ್ಯಗತಗೊಳಿಸಲಾಗಿದೆ. ಈ ಯೋಜನೆಗಳಲ್ಲಿ ಕೆಲವು ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದವೂ ಆಗಿವೆ. ನಾವು ಫುಟ್ಬಾಲ್ ಮೈದಾನಗಳು ಮತ್ತು ಇತರ ಕ್ರೀಡಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಮಾರಿಷಸ್‌ನಾದ್ಯಂತ ಇವುಗಳನ್ನು ಕಾಣಬಹುದು’ಎಂದು ಮಾರಿಷಸ್‌ನ ಭಾರತದ ಹೈಕಮಿಷನರ್ ಅನುರಾಗ್ ಶ್ರೀವಾಸ್ತವ ಪಿಟಿಐಗೆ ತಿಳಿಸಿದ್ದಾರೆ.
ಈ ಮಧ್ಯೆ, ಪ್ರಧಾನ ಮಂತ್ರಿಯವರ ಭೇಟಿಗಾಗಿ ಪೋರ್ಟ್ ಲೂಯಿಸ್‌ನ ವಿವಿಧ ಸ್ಥಳಗಳಲ್ಲಿ ಸಿದ್ಧತೆಗಳು ನಡೆಯುತ್ತಿವೆ.
ತಡರಾತ್ರಿ ಮಾರಿಷಸ್‌ಗೆ ತೆರಳಿರುವ ಮೋದಿ
ತಡರಾತ್ರಿ ಮಾರಿಷಸ್‌ಗೆ ತೆರಳಿರುವ ಪ್ರಧಾನಿ ಮೋದಿ, ಈ ಭೇಟಿಯು ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಹೊಸ ಮತ್ತು ಪ್ರಕಾಶಮಾನವಾದ ಅಧ್ಯಾಯವನ್ನು ತೆರೆಯುತ್ತದೆ ಎಂದು ಹೇಳಿದ್ದಾರೆ.
ಮಾರಿಷಸ್‌ನ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸಲು ಆಹ್ವಾನದ ದಮೇರೆಗೆ ಅವರು ತೆರಳಿದ್ದು, ಇಂದು ಮತ್ತು ನಾಳೆ ರಂದು ಮಾರಿಷಸ್‌ನಲ್ಲಿ ಇರುತ್ತಾರೆ.
‘ನಮ್ಮ ಜನರ ಪ್ರಗತಿ ಮತ್ತು ಸಮೃದ್ಧಿಗಾಗಿ ನಮ್ಮ ಶಾಶ್ವತ ಸ್ನೇಹವನ್ನು ಬಲಪಡಿಸಲು ಮತ್ತು ಎಲ್ಲಾ ಅಂಶಗಳಲ್ಲಿ ನಮ್ಮ ಪಾಲುದಾರಿಕೆಯನ್ನು ಹೆಚ್ಚಿಸಲು ಮಾರಿಷಸ್‌ನ ನಾಯಕತ್ವದೊಂದಿಗೆ ತೊಡಗಿಸಿಕೊಳ್ಳಲು ಎದುರು ನೋಡುತ್ತಿದ್ದೇನೆ’ ಎಂದು ತಮ್ಮ ನಿರ್ಗಮನ ಹೇಳಿಕೆಯಲ್ಲಿ ಪ್ರಧಾನಿ ಹೇಳಿದ್ದಾರೆ.
ಭಾರತೀಯ ನೌಕಾಪಡೆಯ ಯುದ್ಧನೌಕೆ ಮತ್ತು ಭಾರತೀಯ ವಾಯುಪಡೆಯ ಆಕಾಶ ಗಂಗಾ ಸ್ಕೈಡೈವಿಂಗ್ ತಂಡದೊಂದಿಗೆ ಭಾರತೀಯ ಸಶಸ್ತ್ರ ಪಡೆಗಳ ತುಕಡಿಯು ಮಾರಿಷಸ್ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸಲಿದೆ.
ಮಾರಿಷಸ್‌ನಲ್ಲಿ ಲ್ಯಾಂಡ್ ಆಗಿರುವ ಮೋದಿ ಎಕ್ಸ್ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ ಮಾರಿಷಸ್‌ಗೆ ಬಂದಿಳಿದೆ. ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ವಾಗತಿಸಿದ ವಿಶೇಷ ಸತ್ಕಾರಕ್ಕಾಗಿ ನನ್ನ ಸ್ನೇಹಿತ ಪ್ರಧಾನಿ ಡಾ. ನವೀನ್‌ಚಂದ್ರ ರಾಮ್‌ಗೂಲಮ್ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಈ ಭೇಟಿಯು ಮೌಲ್ಯಯುತ ಸ್ನೇಹಿತನೊಂದಿಗೆ ತೊಡಗಿಸಿಕೊಳ್ಳಲು ಮತ್ತು ವಿವಿಧ ವಲಯಗಳಲ್ಲಿ ಸಹಯೋಗಕ್ಕಾಗಿ ಹೊಸ ಮಾರ್ಗಗಳನ್ನು ಅನ್ವೇಷಿಸಲು ಒಂದು ಅದ್ಭುತ ಅವಕಾಶವಾಗಿದೆ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.