ಜೆ.ಡಿ. ವ್ಯಾನ್ಸ್ ಕುಟುಂಬದೊಂದಿಗೆ ಪ್ರಧಾನಿ ಮೋದಿ
(ಪಿಟಿಐ ಚಿತ್ರ)
ನವದೆಹಲಿ: ಭಾರತ ಮತ್ತು ಅಮೆರಿಕದ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಆಗಿರುವ ಪ್ರಗತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇಬ್ಬರೂ ನಾಯಕರು ನವದೆಹಲಿಯಲ್ಲಿರುವ ಪ್ರಧಾನಿ ನಿವಾಸದಲ್ಲಿ ಸೋಮವಾರ ಸಂಜೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಯಿತು.
ಮಾತುಕತೆಯ ನಂತರ ಮೋದಿ ಅವರು ವ್ಯಾನ್ಸ್ ಮತ್ತು ಅವರ ಪತ್ನಿಗೆ ಉಷಾ ಅವರಿಗೆ ಔತಣಕೂಟ ಆಯೋಜಿಸಿದ್ದರು. ಅಮೆರಿಕದ ಅಧಿಕಾರಿಗಳ ನಿಯೋಗ ಕೂಡ ಔತಣಕೂಟದಲ್ಲಿ ಭಾಗಿಯಾಗಿತ್ತು.
ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಆಗಿರುವ ಪ್ರಗತಿಯನ್ನು ಮೋದಿ ಮತ್ತು ವ್ಯಾನ್ಸ್ ಅವರು ಪರಿಶೀಲಿಸಿದರು ಎಂದು ಕೇಂದ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.
‘ಇಂಧನ, ರಕ್ಷಣೆ, ಮಹತ್ವದ ತಂತ್ರಜ್ಞಾನ ಹಾಗೂ ಇತರ ಕೆಲವು ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ದಿಸೆಯಲ್ಲಿ ಪ್ರಯತ್ನಗಳು ಮುಂದುವರಿದಿರುವುದನ್ನು ಕೂಡ ಅವರು ಗಮನಿಸಿದರು’ ಎಂದು ಅದು ಹೇಳಿದೆ.
ಎರಡೂ ದೇಶಗಳ ಪಾಲಿಗೆ ಮಹತ್ವದ್ದಾಗಿರುವ ಕೆಲವು ಜಾಗತಿಕ ಮತ್ತು ಪ್ರಾದೇಶಿಕ ವಿದ್ಯಮಾನಗಳ ಬಗ್ಗೆ ಇಬ್ಬರೂ ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.