
ಬೆಂಗಳೂರು: ಪ್ರಧಾನಿ ಮೋದಿ ಅವರು ರಾಜ್ಯದ (ಕರ್ನಾಟಕ) ಜನತೆಗೆ ಮಕರ ಸಂಕ್ರಾತಿಯ ಶುಭಾಶಯ ಕೋರಿದ್ದಾರೆ. ಕನ್ನಡದಲ್ಲಿ ಪತ್ರ ಬರೆದು ಶುಭ ಹಾರೈಸಿರುವುದು ವಿಶೇಷ. ಪತ್ರವನ್ನು ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ, ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಸೂರ್ಯನ ಪಥ ಬದಲಾವಣೆಯ ಹೊಸ ಆರಂಭವನ್ನು ಸೂಚಿಸುವ ಸಂಕ್ರಾಂತಿಯು ಭರವಸೆ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ. ದೇಶದಾದ್ಯಂತ ವಿವಿಧ ರೂಪಗಳಲ್ಲಿ, ಆದರೆ ಅಷ್ಟೇ ಉತ್ಸಾಹದಿಂದ ಆಚರಿಸಲಾಗುವ ಈ ಹಬ್ಬವು ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ನಮ್ಮನ್ನೆಲ್ಲ ಒಟ್ಟಾಗಿ ಬೆಸೆಯುವ ಒಗ್ಗಟ್ಟಿನ ಭಾವನೆಯನ್ನು ನೆನಪಿಸುತ್ತದೆ' ಎಂದಿದ್ದಾರೆ.
'ಈ ಹಬ್ಬವು ನಮ್ಮ ರೈತರು ಮತ್ತು ಅವರ ಕುಟುಂಬಗಳ ಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಇದು ನಮ್ಮ ಅನ್ನದಾತರಿಗೆ ಕೃತಜ್ಞತೆಯನ್ನು ಸಲ್ಲಿಸುವ ಮತ್ತು ಆ ಮೂಲಕ ನಮ್ಮ ಸಮಾಜವನ್ನು ಬಲಪಡಿಸುವ ಸಂದರ್ಭವಾಗಿದೆ.
ಸಂಕ್ರಾಂತಿಯು ನಮ್ಮನ್ನು ಆತ್ಮವಿಶ್ವಾಸ ಮತ್ತು ಅಶಾವಾದದೊಂದಿಗೆ ಮುನ್ನಡೆಯಲು ಪ್ರೋತ್ಸಾಹಿಸುತ್ತದೆ. ನಿಮ್ಮ ಮುಂದಿನ ದಿನಗಳು ಯಾವಾಗಲೂ ಸಮೃದ್ಧಿ, ಸಕಾರಾತ್ಮಕತೆ ಮತ್ತು ಉತ್ತಮ ಆರೋಗ್ಯದಿಂದ ಕೂಡಿರಲಿ. ನಿಮ್ಮ ಮನೆಯಲ್ಲಿ ಸಂತೋಷ ನೆಲೆಸಲಿ, ನಿಮ್ಮೆಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿ ಮತ್ತು ಸಮಾಜದಲ್ಲಿ ಸಾಮರಸ್ಯ ಮೂಡಲಿ' ಎಂದೂ ಅವರು ಆಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.