ADVERTISEMENT

ಆರೋಗ್ಯದತ್ತ ಗಮನಹರಿಸಲು ಪಾಠ ಕಲಿಸಿದ ಕೋವಿಡ್: ‘ಮನ್ ಕೀ ಬಾತ್‌’ನಲ್ಲಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಸೆಪ್ಟೆಂಬರ್ 2021, 7:10 IST
Last Updated 26 ಸೆಪ್ಟೆಂಬರ್ 2021, 7:10 IST
ನರೇಂದ್ರ ಮೋದಿ (ಎಪಿ ಚಿತ್ರ)
ನರೇಂದ್ರ ಮೋದಿ (ಎಪಿ ಚಿತ್ರ)   

ನವದೆಹಲಿ: ಕೋವಿಡ್ ಸಾಂಕ್ರಾಮಿಕವು ಜನರು ಆರೋಗ್ಯದ ಕುರಿತು ಕಾಳಜಿ ಮತ್ತು ನೈಸರ್ಗಿಕ ಉತ್ಪನ್ನಗಳ ಬಗ್ಗೆ ಗಮನಹರಿಸುವಂತೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತಿಂಗಳ ರೇಡಿಯೊ ಕಾರ್ಯಕ್ರಮ ‘ಮನ್ ಕೀ ಬಾತ್‌’ನ 81ನೇ ಕಂತಿನಲ್ಲಿ ಮಾತನಾಡಿದ ಅವರು ಆರ್ಥಿಕತೆ, ತಂತ್ರಜ್ಞಾನ, ಕೃಷಿ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದರು.

‘ಇಂದು ವಿಶ್ವ ನದಿ ದಿನ. ಎಲ್ಲರ ಸಹಕಾರದೊಂದಿಗೆ ನೀರಿನ ಮಾಲಿನ್ಯ ತಡೆಗಟ್ಟಬೇಕಿದೆ. ತಮಿಳುನಾಡಿನ ನಾಗಾ ನದಿಯನ್ನು ಸ್ಥಳೀಯರು ಪುನರುಜ್ಜೀವನಗೊಳಿಸಿದ್ದಾರೆ. ಸಬರಮತಿ ನದಿಯನ್ನು ಶುಷ್ಕ ವಾತಾವರಣದಿಂದ ಪುನರುಜ್ಜೀವನಗೊಳಿಸಲಾಗಿದೆ. ನದಿಗಳನ್ನು ಪುನಶ್ಚೇತನಗೊಳಿಸಲು ಸಾಕಷ್ಟು ಕೆಲಸ ಮಾಡಲಾಗುತ್ತಿದೆ’ ಎಂದು ಮೋದಿ ಹೇಳಿದ್ದಾರೆ.

ADVERTISEMENT

ಎಲ್ಲರೂ ವರ್ಷಕ್ಕೊಮ್ಮೆಯಾದರೂ ನದಿಗಳ ದಿನ ಆಚರಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಮಹಾತ್ಮ ಗಾಂಧಿಯವರು ಸ್ವಚ್ಛತಾ ಅಭಿಯಾನ ಆರಂಭಿಸಿದ್ದರು. ಆರ್ಥಿಕ ಸ್ವಚ್ಛತೆಯ ಬಗ್ಗೆಯೂ ನಾವು ಗಮನಹರಿಸಬೇಕಿದೆ ಎಂದ ಮೋದಿ, ಯುಪಿಐಯಂಥ ತಂತ್ರಜ್ಞಾನಗಳ ಜನಪ್ರಿಯತೆಯನ್ನು ಉಲ್ಲೇಖಿಸಿದರು.

ಜಾರ್ಖಂಡ್‌ನಲ್ಲಿ ಮಹಿಳೆಯರು ನಡೆಸುತ್ತಿರುವ ಅಲೋವೆರಾ ಕೃಷಿ ಬಗ್ಗೆ ಮತ್ತು ಅವರ ಬಳಿಯಿಂದ ಸ್ಯಾನಿಟೈಸರ್ ಕಂಪನಿಗಳು ಖರೀದಿ ಮಾಡುತ್ತಿರುವುದರ ಕುರಿತು ಪ್ರಧಾನಿ ಉಲ್ಲೇಖಿಸಿದರು.

ಆಯುಷ್ ಸಚಿವಾಲಯವು ಬೇವು ಮತ್ತು ಅಲೋವೆರಾದಂಥ ಗಿಡಮೂಲಿಕೆ ಮತ್ತು ಔಷಧೀಯ ಸಸ್ಯಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದೆ ಎಂದೂ ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.