ADVERTISEMENT

ಮಹಾರಾಷ್ಟ್ರ ಚುನಾವಣೆ: ಸಿಎಂ ಗಾದಿ ಉಳಿಸಿಕೊಳ್ಳಲು ಮೋದಿ, ಶಾ ಸಭೆಯಲ್ಲಿ ತೀರ್ಮಾನ

ಮಹಾರಾಷ್ಟ್ರ, ಹರಿಯಾಣ ನಾಯಕರ ಜತೆ ಸಭೆ ನಡೆಸಿದ ಪ್ರಧಾನಿ, ಗೃಹ ಸಚಿವ

ಏಜೆನ್ಸೀಸ್
Published 30 ಸೆಪ್ಟೆಂಬರ್ 2019, 1:54 IST
Last Updated 30 ಸೆಪ್ಟೆಂಬರ್ 2019, 1:54 IST
ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ಸಲುವಾಗಿ ಬಿಜೆಪಿ ಚುನಾವಣಾ ಸಮಿತಿ ಸಭೆ ದೆಹಲಿಯಲ್ಲಿ ನಡೆಯಿತು
ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ಸಲುವಾಗಿ ಬಿಜೆಪಿ ಚುನಾವಣಾ ಸಮಿತಿ ಸಭೆ ದೆಹಲಿಯಲ್ಲಿ ನಡೆಯಿತು   

ನವದೆಹಲಿ:ಮಹಾರಾಷ್ಟ್ರವಿಧಾನಸಭೆ ಚುನಾವಣೆಯ ಬಳಿಕ ಮುಖ್ಯಮಂತ್ರಿ ಗಾದಿಯನ್ನು ಬಿಜೆಪಿಯಲ್ಲೇ ಉಳಿಸಿಕೊಂಡು ಮಿತ್ರಪಕ್ಷ ಶಿವಸೇನಾಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

‘ಶಿವಸೈನಿಕನನ್ನು (ಶಿವಸೇನಾ ಕಾರ್ಯಕರ್ತ) ಮಹಾರಾಷ್ಟ್ರದ ಮುಖ್ಯಮಂತ್ರಿ ಮಾಡುತ್ತೇನೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಘೋಷಿಸಿದ ಮರುದಿನವೇ ಬಿಜೆಪಿ ಈ ನಿರ್ಧಾರ ಕೈಗೊಂಡಿದೆ.

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವ ಸಲುವಾಗಿ ಉಭಯ ರಾಜ್ಯಗಳ ನಾಯಕರ ಜತೆ ಮೋದಿ ಮತ್ತು ಅಮಿತ್ ಶಾ ಸಭೆ ನಡೆಸಿದರು.

ಈ ಮಧ್ಯೆ, ಹಲವು ವಿಚಾರಗಳಲ್ಲಿ ಬಿನ್ನಾಭಿಪ್ರಾಯ ಹೊಂದಿದ್ದರೂ ಸೀಟು ಹಂಚಿಕೆ ವಿಚಾರದಲ್ಲಿ ಶಿವಸೇನಾ ಮತ್ತು ಬಿಜೆಪಿ ಒಮ್ಮತಕ್ಕೆ ಬಂದಿವೆ. 288 ಕ್ಷೇತ್ರಗಳ ಪೈಕಿ 144ರಲ್ಲಿ ಬಿಜೆಪಿ, 126ರಲ್ಲಿ ಶಿವಸೇನಾ ಹಾಗೂ ಉಳಿದ 18 ಕ್ಷೇತ್ರಗಳಲ್ಲಿ ಇತರ ಮಿತ್ರ ಪಕ್ಷಗಳು ಸ್ಪರ್ಧಿಸಲಿವೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ವಿಚಾರ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ.

ಉದ್ಧವ್ ಠಾಕ್ರೆ ಮಗ ಆದಿತ್ಯ ಠಾಕ್ರೆ ಅವರನ್ನು ವರ್ಲಿ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಉಭಯ ಪಕ್ಷಗಳು ಒಮ್ಮತಕ್ಕೆ ಬಂದಿವೆ ಎಂದುಎಎನ್‌ಐಸುದ್ದಿಸಂಸ್ಥೆ ವರದಿ ಮಾಡಿದೆ.

2014ರ ವಿಧಾನಸಭೆ ಚುನಾವಣೆ ವೇಳೆ ಉಭಯ ಪಕ್ಷಗಳ ನಡುವಣ ಸೀಟು ಹಂಚಿಕೆ ಬಿಕ್ಕಟ್ಟು ತಾರಕಕ್ಕೇರಿತ್ತಲ್ಲದೆ, ಮೈತ್ರಿಯೇ ಮುರಿದುಬಿದ್ದಿತ್ತು. ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿಗೆ ಸ್ಪಷ್ಟ ಬಹುಮತಕ್ಕೆ ಕೆಲವೇ ಸೀಟುಗಳ ಕೊರತೆ ಎದುರಾಗಿತ್ತು. ಬಳಿಕ ಎರಡೂ ಪಕ್ಷಗಳು ಒಂದಾಗಿ ಸರ್ಕಾರ ರಚಿಸಿದ್ದವು.

‘ಶಿವಸೈನಿಕನನ್ನು (ಶಿವಸೇನಾ ಕಾರ್ಯಕರ್ತ) ಮಹಾರಾಷ್ಟ್ರದ ಮುಖ್ಯಮಂತ್ರಿ ಮಾಡುತ್ತೇನೆ ಎಂದು ನನ್ನ ತಂದೆ, ಬಾಳಾ ಠಾಕ್ರೆ ಅವರಿಗೆ ನಾನು ಮಾತು ಕೊಟ್ಟಿದ್ದೆ. ಅದನ್ನು ಈಡೇರಿಸಲು ಬದ್ಧನಾಗಿದ್ದೇನೆ’ ಎಂದು ಶನಿವಾರವಷ್ಟೇ ಉದ್ಧವ್ ಠಾಕ್ರೆ ಹೇಳಿದ್ದರು. ಅಲ್ಲದೆ, 50:50 ಅನುಪಾತದಲ್ಲಿ ಸೀಟು ಹಂಚಿಕೆ ಆಗಬೇಕು ಎಂಬ ಬೇಡಿಕೆ ಇಟ್ಟಿದ್ದರು.ಇದು ಮಿತ್ರ ಪಕ್ಷಗಳ ನಡುವೆ ಮತ್ತೆ ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದೆ.

ಎರಡೂ ರಾಜ್ಯಗಳಲ್ಲಿ ನಾಮಪತ್ರ ಸಲ್ಲಿಸಲಿರುವ ಅಂತಿಮ ದಿನಾಂಕ ಅಕ್ಟೋಬರ್ 4 ಆಗಿದೆ. ಅಕ್ಟೋಬರ್ 21ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 24ರಂದು ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.