ADVERTISEMENT

ಮೋದಿಗೆ ಅದಾನಿ ಮೇಲಿರುವ ಕಾಳಜಿ ವಯನಾಡ್‌ ಸಂತ್ರಸ್ತರ ಮೇಲಿಲ್ಲ: ರಾಹುಲ್‌ ಗಾಂಧಿ

ಪಿಟಿಐ
Published 30 ನವೆಂಬರ್ 2024, 16:05 IST
Last Updated 30 ನವೆಂಬರ್ 2024, 16:05 IST
<div class="paragraphs"><p>ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಲು ಶನಿವಾರ ಕೋಯಿಕ್ಕೋಡ್‌ನ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಬಂದಿಳಿದ&nbsp;ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜನರತ್ತ ಕೈಮುಗಿದರು</p></div>

ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಲು ಶನಿವಾರ ಕೋಯಿಕ್ಕೋಡ್‌ನ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜನರತ್ತ ಕೈಮುಗಿದರು

   

ಪಿಟಿಐ ಚಿತ್ರ

ಕೋಯಿಕ್ಕೋಡ್‌ (ಕೇರಳ): ‘ಪ್ರಧಾನಿ ಮೋದಿ ಅವರು ಉದ್ಯಮಿ ಗೌತಮ್ ಅದಾನಿ ಅವರನ್ನು ಮಾತ್ರ ಭಿನ್ನವಾಗಿ ನಡೆಸಿಕೊಳ್ಳುತ್ತಾರೆ. ಭೂಕುಸಿತದ ಸಂತ್ರಸ್ತ ವಯನಾಡು ಜನರಿಗೆ ಯಾವುದೇ ನೆರವು ಕೊಡದೆ, ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ಮಾಡಿದ್ದಾರೆ.

ADVERTISEMENT

ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆಯ ನಂತರ ತಮ್ಮ ಸಹೋದರಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಮೊದಲ ಬಾರಿಗೆ ಭೇಟಿ ನೀಡಿದ ರಾಹುಲ್, ಇಲ್ಲಿನ ಮುಕ್ಕಂನಲ್ಲಿ ನಡೆದ ಜಂಟಿ ಸಾರ್ವಜನಿಕ ಸಭೆಯಲ್ಲಿ ಮೋದಿ ವಿರುದ್ಧ ಕಿಡಿಕಾರಿದರು. 

‘ಅಮೆರಿಕದಲ್ಲಿ ಏನೇ ಆದರೂ ಪರವಾಗಿಲ್ಲ. ಭಾರತದಲ್ಲಿ ನಾವು ಅದಾನಿ ಮೇಲೆ ದೋಷಾರೋಪಣೆ ಮಾಡುವುದಿಲ್ಲ ಎಂಬ ನಿಲುವನ್ನು ಮೋದಿ ತಳೆದಿದ್ದಾರೆ’ ಎಂದು ರಾಹುಲ್ ಆರೋಪಿಸಿದರು.

‘ದುರದೃಷ್ಟವಶಾತ್, ನಾವು ಅಧಿಕಾರದಲ್ಲಿಲ್ಲ. ಸರ್ಕಾರ ಮಾಡಬೇಕಾದ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ವಯನಾಡು ಭೂಕುಸಿತದ ಸಂತ್ರಸ್ತರ ಕುಟುಂಬಗಳಿಗೆ ನೆರವು ಒದಗಿಸಲು ಕೇರಳ ಸರ್ಕಾರದ ಮೇಲೆ ಕಾಂಗ್ರೆಸ್ ಹಾಗೂ ಯುಡಿಎಫ್ ಒತ್ತಡ ಹೇರುವಂತೆ ಸಹೋದರಿ ಪ್ರಿಯಾಂಕಾ, ಕೆ.ಸಿ.ವೇಣುಗೋಪಾಲ್ ಅವರಿಗೆ ಹೇಳಿದ್ದೇನೆ' ಎಂದು ತಿಳಿಸಿದರು.

ಬಿಜೆಪಿ ಪ್ರಜಾಪ್ರಭುತ್ವದ ನೀತಿ–ನಿಯಮ ಪಾಲಿಸಲ್ಲ: ಪ್ರಿಯಾಂಕಾ ಕಿಡಿ

‘ಬಿಜೆಪಿಯು ರಾಜಕೀಯ ಹೋರಾಟದಲ್ಲಿ ಪ್ರಜಾಪ್ರಭುತ್ವದ ಯಾವುದೇ ನೀತಿ ನಿಯಮಗಳನ್ನು ಪಾಲಿಸುತ್ತಿಲ್ಲ’ ಎಂದು ವಯನಾಡ್‌ ಕ್ಷೇತ್ರದ ಸಂಸದೆ ಪ್ರಿಯಾಂಕಾ ಗಾಂಧಿ ಕಿರಿಕಾರಿದ್ದಾರೆ. ‘ಒತ್ತಡಕ್ಕೆ ಒಳಗಾಗದ ನ್ಯಾಯಯುತ ಸಮತೋಲಿತ ಮತ್ತು ಬಲವಾದ ನ್ಯಾಯಾಂಗದ ಅವಶ್ಯಕತೆಯೂ ದೇಶಕ್ಕೆ ಇದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

ವಯನಾಡ್ ಕ್ಷೇತ್ರದಿಂದ ಚೊಚ್ಚಲ ಚುನಾವಣಾ ಗೆಲುವಿನ ನಂತರ ಕೇರಳಕ್ಕೆ ಶನಿವಾರ ಎರಡು ದಿನಗಳ ಭೇಟಿ ನೀಡಿರುವ ಅವರು ಮುಕ್ಕಂನಲ್ಲಿ ಸಹೋದರ ರಾಹುಲ್ ಗಾಂಧಿ ಜತೆ ಸಾರ್ವಜನಿಕ ಜಂಟಿ ಸಭೆಯಲ್ಲಿ ಮಾತನಾಡಿದರು. 

‘ಅವರು (ಬಿಜೆಪಿ) ನಕಾರಾತ್ಮಕ ಮತ್ತು ವಿನಾಶಕಾರಿ ಕಾರ್ಯಸೂಚಿ ಹೊಂದಿದ್ದಾರೆ. ದೇಶದಲ್ಲಿ ಸಂಸ್ಥೆಗಳು ನಾಶವಾಗುತ್ತಿವೆ. ಇದು ಚುನಾವಣಾ ಪ್ರಕ್ರಿಯೆಯಲ್ಲಿ ಜನರ ಮೂಲಭೂತ ನಂಬಿಕೆ ಮತ್ತು ನಮ್ಮ ದೇಶವನ್ನು ಒಟ್ಟಾಗಿರಿಸಿರುವ ಸಂಸ್ಥೆಗಳು ಕ್ಷೀಣಿಸಲು ಕಾರಣವಾಗುತ್ತದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

‘ವಯನಾಡ್ ಜನರ ಉತ್ತಮ ಭವಿಷ್ಯಕ್ಕಾಗಿ ನನ್ನಿಂದ ಸಾಧ್ಯವಿರುವ ಎಲ್ಲವನ್ನು ಮಾಡಲು ಸಿದ್ಧಳಿದ್ದೇನೆ’ ಎಂದೂ ಪ್ರಿಯಾಂಕಾ ತಿಳಿಸಿದರು. ಮಲಪ್ಪುರ ಜಿಲ್ಲೆಯ ನಿಲಂಬೂರ್ ವಿಧಾನಸಭಾ ಕ್ಷೇತ್ರದ ಕರುಲೈನಲ್ಲಿ ಪ್ರಿಯಾಂಕಾ ಅವರಿಗೆ ಜನರು ಭವ್ಯ ಸ್ವಾಗತ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.