ADVERTISEMENT

ಕೊರೊನಾ ವಿರುದ್ಧದ ಹೋರಾಟ: ಬಿಲ್ ಗೇಟ್ಸ್ ಜತೆ ಪ್ರಧಾನಿ ಮೋದಿ ಮಾತುಕತೆ

ಸಾಗರ್ ಕುಲಕರ್ಣಿ
Published 15 ಮೇ 2020, 3:35 IST
Last Updated 15 ಮೇ 2020, 3:35 IST
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಲ್‌ ಗೇಟ್ಸ್‌
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಲ್‌ ಗೇಟ್ಸ್‌   

ನವದೆಹಲಿ: ಕೊರೊನಾ ವೈರಸ್ ಸೋಂಕಿನ (ಕೋವಿಡ್–19) ವಿರುದ್ಧದ ಜಾಗತಿಕ ಹೋರಾಟಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಮೈಕ್ರೊಸಾಫ್ಟ್‌ ಸಹ ಸ್ಥಾಪಕ ಬಿಲ್‌ ಗೇಟ್ಸ್‌ ಜತೆ ಗುರುವಾರ ಮಾತುಕತೆ ನಡೆಸಿದ್ದಾರೆ. ಈ ವೇಳೆ, ಕೋವಿಡ್ ವಿರುದ್ಧದ ಹೋರಾಟ ಬಲಪಡಿಸುವ ನಿಟ್ಟಿನಲ್ಲಿ ವಿಶ್ವದಾದ್ಯಂತ ಆರೋಗ್ಯ ಸೇತು ಆ್ಯಪ್‌ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮೋದಿ ಪ್ರಸ್ತಾಪಿಸಿದ್ದಾರೆ.

ಭಾರತದ ಸಾಮರ್ಥ್ಯ ಮತ್ತು ಅದನ್ನು ಜಗತ್ತಿನ ಪ್ರಯೋಜನಕ್ಕೆ ಹೇಗೆ ಉತ್ತಮವಾಗಿ ಬಳಸಿಕೊಳ್ಳಬಹುದು ಎಂಬ ಕುರಿತು ಮೋದಿ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ.

‘ಗ್ರಾಮೀಣ ಪ್ರದೇಶಗಳವರೆಗೂ ಆರೋಗ್ಯ ಸೇವೆ ನೀಡುವ ಭಾರತದ ಮಾದರಿ, ಸೋಂಕಿತರ ಸಂಪರ್ಕ ಪತ್ತೆಹಚ್ಚುವ ನಿಟ್ಟಿನಲ್ಲಿ ಭಾರತ ಅಭಿವೃದ್ಧಿಪಡಿಸಿರುವ ಪರಿಣಾಮಕಾರಿ ಆ್ಯಪ್, ಚಿಕಿತ್ಸಾ ಉಪಕರಣಗಳ ಮತ್ತು ಲಸಿಕೆ ಉತ್ಪಾದನೆ ಹೆಚ್ಚಿಸುವುದರ ಮೂಲಕ ಭಾರತದ ಔಷಧೀಯ ಸಾಮರ್ಥ್ಯವನ್ನು ದೊಡ್ಡಮಟ್ಟದಲ್ಲಿ ಹೆಚ್ಚಿಸುವ ವಿಚಾರವಾಗಿ ಉಭಯರು ಚರ್ಚಿಸಿದ್ದಾರೆ’ ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಕೊರೊನಾ ವಿರುದ್ಧದ ಹೋರಾಟದಲ್ಲಿ ಜಾಗತಿಕ ಪ್ರಯತ್ನಕ್ಕೆ ಭಾರತದ ಸಾಮರ್ಥ್ಯವನ್ನು ಬಳಸಿಕೊಳ್ಳುವುದು, ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ನೆರವಾಗುವ ವಿಚಾರದಲ್ಲಿ ಮೋದಿ ಮತ್ತು ಗೇಟ್ಸ್‌ ಸಹಮತಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಕೊರೊನೋತ್ತರ ಜಗತ್ತಿನ ಜೀವನ ವಿಧಾನ, ಆರ್ಥಿಕ ಸಂಘಟನೆ, ಸಾಮಾಜಿಕ ಜೀವನ, ಆರೋಗ್ಯ ಮತ್ತು ಶಿಕ್ಷಣ ಸೇವೆಯಲ್ಲಿ ಆಗಬೇಕಾದ ಬದಲಾವಣೆಗಳ ಕುರಿತಾದ ವಿಶ್ಲೇಷಣೆಯ ನೇತೃತ್ವವನ್ನು ‘ಗೇಟ್ಸ್‌ ಫೌಂಡೇಶನ್’ ವಹಿಸಿಕೊಳ್ಳಬೇಕು ಎಂದೂ ಗೇಟ್ಸ್‌ ಅವರಿಗೆ ಮೋದಿ ಸಲಹೆ ನೀಡಿದ್ದಾರೆ.

ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ಕಾರ್ಯನಿರ್ವಹಿಸುವ ‘ಮಿಲಿಂದಾ ಗೇಟ್ಸ್‌ ಫೌಂಡೇಶನ್‌’ ಅಧ್ಯಕ್ಷರೂ ಆಗಿದ್ದಾರೆ ಬಿಲ್ ಗೇಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.