ಕೊಚ್ಚಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಭಾರತದ ಮೊದಲ ದೇಶೀಯ ನಿರ್ಮಿತ ಯುದ್ಧ ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ಗೆ ಚಾಲನೆ ನೀಡಿದರು.
ಈ ಮೂಲಕ, ಭಾರತವು ದೊಡ್ಡ ಯುದ್ಧನೌಕೆಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿರುವ ದೇಶಗಳ ಗುಂಪಿಗೆ ಸೇರ್ಪಡೆಗೊಂಡಿತು.
₹20,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೌಕೆಗೆ ಕೊಚ್ಚಿಯ ’ಶಿಪ್ ಯಾರ್ಡ್ ಲಿಮಿಟೆಡ್’ ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪ್ರಧಾನಿ ಚಾಲನೆ ನೀಡಿದರು.
ರಕ್ಷಣಾ ಸಚಿವ ರಾಜನಾಥ ಸಿಂಗ್, ನೌಕಾಯಾನ ಸಚಿವ ಸರಬಾನಂದ ಸೋನೋವಾಲ್, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಎರ್ನಾಕುಲಂ ಸಂಸದ ಹಿಬಿ ಈಡನ್, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಮತ್ತು ನೌಕಾಪಡೆಯ ಉನ್ನತ ಅಧಿಕಾರಿಗಳು ಸೇರಿದಂತೆ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಫಲಕ ಅನಾವರಣ ಮಾಡುವ ಮೂಲಕ ವಿಕ್ರಾಂತ್ ಸೇವೆಗೆ ಮೋದಿ ಚಾಲನೆ ನೀಡಿದರು.
ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ರಕ್ಷಣಾ ವಲಯವನ್ನು ಸ್ವಾವಲಂಬಿಯನ್ನಾಗಿ ಮಾಡುವ ಭಾರತ ಸರ್ಕಾರದ ಬದ್ಧತೆಗೆ ವಿಕ್ರಾಂತ್ ಒಂದು ಉದಾಹರಣೆಯಾಗಿದೆ. ಈ ಮೂಲಕ ಭಾರತವು ಯುದ್ಧವಿಮಾನ ವಾಹಕವನ್ನು ನಿರ್ಮಾಣ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆ ಗೊಂಡಿದೆ ಎಂದು ಹೆಮ್ಮೆಪಟ್ಟರು.
‘ಐಎನ್‌ಎಸ್ ವಿಕ್ರಾಂತ್ ಕೇವಲ ಯುದ್ಧ ಯಂತ್ರವಲ್ಲ. ಭಾರತದ ಕೌಶಲ್ಯ ಮತ್ತು ಪ್ರತಿಭೆಗೆ ಪುರಾವೆಯಾಗಿದೆ. ಇದು ವಿಶೇಷವಾದದ್ದು, ವಿಭಿನ್ನವಾದದ್ದು’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.