ADVERTISEMENT

ಕೋವಿಡ್‌ ಲಸಿಕೆ ಅಭಿಯಾನಕ್ಕೆ 16ರಂದು ಪ್ರಧಾನಿ ಮೋದಿ ಚಾಲನೆ: ನೀತಿ ಆಯೋಗ

ಏಜೆನ್ಸೀಸ್
Published 14 ಜನವರಿ 2021, 8:30 IST
Last Updated 14 ಜನವರಿ 2021, 8:30 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಜ.16ರಿಂದ ದೇಶದಾದ್ಯಂತ ಆರಂಭವಾಗಲಿರುವ ಕೋವಿಡ್‌ ಲಸಿಕೆ ವಿತರಣೆ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ ಎಂದು ನೀತಿ ಆಯೋಗವು ಸ್ಪಷ್ಟಪಡಿಸಿದೆ.

ಈ ವಿಚಾರವಾಗಿ ಎನ್‌ಡಿಟಿವಿಗೆ ಮಾಹಿತಿ ನೀಡಿರುವ ನೀತಿ ಆಯೋಗದ ಸದಸ್ಯರಾಗಿರುವ ವಿ.ಕೆ.ಪೌಲ್‌, 'ಕೋವಿಡ್‌ ಲಸಿಕೆ ವಿತರಣೆ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಮೊದಲ ದಿನ ಸುಮಾರು 3 ಲಕ್ಷ ಜನರು ಲಸಿಕೆಗಳನ್ನು ಸ್ವೀಕರಿಸಲಿದ್ದಾರೆ' ಎಂದು ತಿಳಿಸಿದ್ದಾರೆ.

ದೇಶದಾದ್ಯಂತ ಒಟ್ಟು 3,000 ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆ ಅಭಿಯಾನವು ನಡೆಯಲಿದ್ದು, ಪ್ರತಿ ಕೇಂದ್ರದಲ್ಲಿ ದಿನವೊಂದಕ್ಕೆ 100 ಜನರಿಗೆ ಲಸಿಕೆ ನೀಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

ADVERTISEMENT

ಮುಂದಿನ ದಿನಗಳಲ್ಲಿ 5000 ಸಾವಿರ ಕೇಂದ್ರಗಳಲ್ಲಿ ಲಸಿಕೆ ಅಭಿಯಾನವನ್ನು ಆರಂಭಿಸುವ ಚಿಂತನೆ ಇದೆ ಎಂದು ಪೌಲ್‌ ತಿಳಿಸಿದ್ದಾರೆ.

ಜ.16ರಿಂದ ಆದ್ಯತೆ ಮೇರೆಗೆ 3 ಕೋಟಿ ಆರೋಗ್ಯ ಸೇವೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕುವ ಮೂಲಕ ಲಸಿಕೆ ಅಭಿಯಾನ ಆರಂಭಿಸಲಾಗುವುದು ಎಂದು ಶನಿವಾರ ಕೇಂದ್ರ ಸರ್ಕಾರ ಪ್ರಕಟಿಸಿದೆ.

ಆರೋಗ್ಯ ಸೇವೆ ಮತ್ತು ಮುಂಚೂಣಿ ಕಾರ್ಯಕರ್ತರ ಬಳಿಕ 50 ವರ್ಷ ಮೇಲ್ಪಟ್ಟ, 50 ವರ್ಷದೊಳಗಿನ 27 ಕೋಟಿ ಜನರಿಗೆ ಆದ್ಯತೆ ಮೇರೆಗೆ ಲಸಿಕೆ ವಿತರಣೆ ಮಾಡಲಾಗುತ್ತದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‌ ಸಂಸ್ಥೆಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಷರತ್ತುಬದ್ಧ ಲಸಿಕೆ ಬಳಕೆಗೆ ಡಿಸಿಜಿಐ ಭಾನುವಾರ ಅನುಮೋದನೆ ನೀಡಿತ್ತು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಸಂಸ್ಥೆಗಳು 'ಕೋವಿಶೀಲ್ಡ್' ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

ದೇಶದಲ್ಲಿ ಈ ವರೆಗೆ ಒಟ್ಟು 1,04,95,147 ಪ್ರಕರಣಗಳು ಬೆಳಕಿಗೆ ಬಂದಿದ್ದು, 1,51,529 ಮಂದಿ ಸಾವಿಗೀಡಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 17,817 ಸೋಂಕಿತರು ಚೇತರಿಸಿಕೊಂಡಿದ್ದು, ಈ ವರೆಗೆ ಗುಣಮುಖರಾದವರ ಸಂಖ್ಯೆ 1,01,29,111 ಕ್ಕೆ ತಲುಪಿದೆ.2,14,507 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.