ADVERTISEMENT

ಶ್ರೀ ನಾರಾಯಣ ಗುರುಗಳ ಬೋಧನೆ ಪಾಲನೆಯಿಂದ ದೇಶದಲ್ಲಿ ಒಗ್ಗಟ್ಟು: ಪ್ರಧಾನಿ

ಪಿಟಿಐ
Published 26 ಏಪ್ರಿಲ್ 2022, 11:29 IST
Last Updated 26 ಏಪ್ರಿಲ್ 2022, 11:29 IST
ನವದೆಹಲಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀ ನಾರಾಯಣ ಗುರು ಅವರ ಪ್ರತಿಮೆಯನ್ನು ನೀಡಿ ಗೌರವಿಸಲಾಯಿತು  –ಪಿಟಿಐ ಚಿತ್ರ
ನವದೆಹಲಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀ ನಾರಾಯಣ ಗುರು ಅವರ ಪ್ರತಿಮೆಯನ್ನು ನೀಡಿ ಗೌರವಿಸಲಾಯಿತು  –ಪಿಟಿಐ ಚಿತ್ರ   

ನವದೆಹಲಿ/ತಿರುವಂತನಪುರ:‘ಒಂದು ಜಾತಿ, ಒಂದು ಧರ್ಮ, ಒಬ್ಬನೇ ದೇವರು ಎಂಬ ಶ್ರೀ ನಾರಾಯಣ ಗುರುಗಳ ಸಂದೇಶವನ್ನು ಎಲ್ಲರೂ ಪಾಲಿಸಿದರೆ ಜಗತ್ತಿನ ಯಾವೊಂದು ಶಕ್ತಿಯೂ ಭಾರತವನ್ನು ವಿಭಜಿಸಲು ಸಾಧ್ಯವಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಶಿವಗಿರಿ ತೀರ್ಥಯಾತ್ರೆಯ 90ನೇ ವರ್ಷಾಚರಣೆ ಹಾಗೂ ಬ್ರಹ್ಮ ವಿದ್ಯಾಲಯದ ಸುವರ್ಣ ಮಹೋತ್ಸವದ ಅಂಗವಾಗಿ ಶ್ರೀ ನಾರಾಯಣ ಧರ್ಮ ಸಂಘ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ‘ಭಾರತೀಯರಾದ ನಮಗೆ ಇರುವುದು ಒಂದೇ ಜಾತಿ, ಅದು ಭಾರತೀಯತೆ. ಒಂದೇ ಧರ್ಮ, ಅದು ಸೇವೆ ಮತ್ತು ಕರ್ತವ್ಯ. ಒಂದೇ ದೇವರು, ಅದು ಭಾರತ ಮಾತೆ’ ಎಂದರು.

‘ಭಾರತದ ಸಮಾಜದಲ್ಲಿ ಅವಿಭಾಜ್ಯ ಅಂಗವಾಗಿರುವ ಜಾತಿ ಪದ್ಧತಿಯಂತಹ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ಶ್ರೀ ನಾರಾಯಣ ಗುರುಗಳು ಆಧುನಿಕತೆ ಹಾಗೂ ಸಾಂಪ್ರಾದಾಯಿಕ ಮೌಲ್ಯಗಳಿಗೆ ಸಮಾನ ಒತ್ತು ನೀಡಿದರು’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

‘ನಮ್ಮ ಸ್ವಾತಂತ್ರ್ಯ ಹೋರಾಟವು ಕೇವಲ ಪ್ರತಿಭಟನೆ ಹಾಗೂ ರಾಜಕೀಯ ತಂತ್ರಗಾರಿಕೆಗೆ ಸೀಮಿತವಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟವು ಗುಲಾಮಗಿರಿಯ ಸರಪಳಿಯನ್ನು ಕಿತ್ತೆಸೆಯುವುದರ ಜೊತೆಗೆ, ಒಂದು ಸ್ವತಂತ್ರ ರಾಷ್ಟ್ರವಾಗಿ ದೇಶ ಹೇಗಿರಬೇಕು ಎಂಬುದನ್ನು ಆಧ್ಯಾತ್ಮದ ತಳಹದಿ ನಮಗೆ ನೀಡಿದೆ. ನಾವು ಯಾವ ವಿಷಯದ ವಿರುದ್ಧ ಇದ್ದೇವೆ ಎಂಬುದು ಮುಖ್ಯವಲ್ಲ. ಯಾವ ಸಂಕಲ್ಪಕ್ಕೆ ಬದ್ಧರಾಗಿದ್ದೇವೆ ಎಂಬುದು ಮುಖ್ಯ’ ಎಂದು ಅವರು ಹೇಳಿದರು.

‘ರವೀಂದ್ರನಾಥ್‌ ಟ್ಯಾಗೋರ್‌, ಸ್ವಾಮಿ ವಿವೇಕಾನಂದ‌, ಮಾಹಾತ್ಮ ಗಾಂಧಿ, ನಾರಾಯಣ ಗುರು ಇತರೆ ಗಣ್ಯ ವ್ಯಕ್ತಿಗಳು ಭಾರತದ ಪುನರ್ನಿರ್ಮಾಣಕ್ಕೆ ಬೀಜ ಬಿತ್ತಿದ್ದರು. ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರ ಇದರ ಫಲಿತಾಂಶ ಕಾಣಿಸುತ್ತಿದೆ’ ಎಂದರು.

ಇದೇ ವೇಳೆ ವರ್ಷಾವಧಿಯ ಜಂಟಿ ಆಚರಣೆಗಳ ಲೋಗೊವನ್ನು ಪ್ರಧಾನಿ ಅವರು ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.