ADVERTISEMENT

ತಮಿಳು ಸಂಸ್ಕೃತಿ, ಭಾಷೆ, ಜನರ ಬಗ್ಗೆ ಪ್ರಧಾನಿ ಮೋದಿಗೆ ಗೌರವವಿಲ್ಲ: ರಾಹುಲ್ ಗಾಂಧಿ

ಏಜೆನ್ಸೀಸ್
Published 23 ಜನವರಿ 2021, 9:59 IST
Last Updated 23 ಜನವರಿ 2021, 9:59 IST
ಕೊಯಮತ್ತೂರಿನಲ್ಲಿ ನಡೆದ ರ್‍ಯಾಲಿ ರಾಹುಲ್‌ ಗಾಂಧಿ
ಕೊಯಮತ್ತೂರಿನಲ್ಲಿ ನಡೆದ ರ್‍ಯಾಲಿ ರಾಹುಲ್‌ ಗಾಂಧಿ   

ಕೊಯಮತ್ತೂರು: ತಮಿಳುನಾಡಿನ ಸಂಸ್ಕೃತಿ, ಭಾಷೆ ಹಾಗೂ ಜನರ ಬಗ್ಗೆ ಪ್ರಧಾನಿ ಮೋದಿಗೆ ಗೌರವವಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.

'ಪ್ರಸ್ತುತ ಭಾರತದಲ್ಲಿ ಒಂದು ಭಾಷೆ, ಒಂದು ಸಂಸ್ಕೃತಿ ಎಂಬ ಪರಿಕಲ್ಪನೆಯನ್ನು ಹೇರಲು ಪ್ರಯತ್ನಿಸಲಾಗುತ್ತಿದೆ. ಅದರ ವಿರುದ್ಧ ನಾವು ಹೋರಾಟ ನಡೆಸಿದ್ದೇವೆ. ತಮಿಳುನಾಡಿನ ಸಂಸ್ಕೃತಿ, ಭಾಷೆ ಮತ್ತು ಜನರ ಬಗ್ಗೆ ಮೋದಿಗೆ ಗೌರವವಿಲ್ಲ. ತಮಿಳು ಜನರು, ಭಾಷೆ ಮತ್ತು ಸಂಸ್ಕೃತಿ ಅವರ ಪರಿಕಲ್ಪನೆಗೆ ಅಧೀನವಾಗಿರಬೇಕೆಂದು ಮೋದಿ ಬಯಸುತ್ತಾರೆ. ತಮಿಳು, ಹಿಂದಿ, ಬಂಗಾಳಿ, ಇಂಗ್ಲಿಷ್ ಸೇರಿದಂತೆ ಎಲ್ಲ ಭಾಷೆಗಳಿಗೆ ಈ ದೇಶದಲ್ಲಿ ಜಾಗವಿದೆ ಎಂಬುದಾಗಿ ನಾವು ನಂಬಿದ್ದೇವೆ' ಎಂದು ರಾಹುಲ್‌ ಹೇಳಿದ್ದಾರೆ.

ADVERTISEMENT

'ತಮಿಳುನಾಡನ್ನು ದೇಶದ ಮುಂಚೂಣಿ ರಾಜ್ಯವೆಂದು ನಾನು ಪರಿಗಣಿಸಿದ್ದೇನೆ. ಭಾರತಕ್ಕೆ ಉತ್ಪಾದನೆ, ಕೈಗಾರಿಕೀಕರಣ ಮತ್ತು ಉದ್ಯೋಗದ ಅಗತ್ಯವಿದೆ. ಭಾರತದ ಉಳಿದ ರಾಜ್ಯಗಳು ತಮಿಳುನಾಡಿನಿಂದ ಕಲಿಯಲು ಬಹಳಷ್ಟಿದೆ' ಎಂದು ಅವರು ಪ್ರಶಂಸಿಸಿದ್ದಾರೆ.

'ಈ ಸಂದರ್ಭದಲ್ಲಿ ತಮಿಳುನಾಡಿನ ಯುವಕರಿಗೆ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ರೈತರು ಕಷ್ಟಪಡುತ್ತಿದ್ದಾರೆ. ಅದಕ್ಕಾಗಿಯೇ ನಿಮಗೆ ಹೊಸ ಸರ್ಕಾರದ ಅವಶ್ಯಕತೆ ಇದೆ. ನಿಮಗೆ ಯೋಗ್ಯವಾದ ಸರ್ಕಾರವನ್ನು ನೀಡಲು ಕಾಂಗ್ರೆಸ್ ಪಕ್ಷವು ನಿಮ್ಮೊಂದಿಗೆ ಕೆಲಸ ಮಾಡಲಿದೆ' ಎಂದು ರಾಹುಲ್‌ ಆಶ್ವಾಸನೆ ನೀಡಿದ್ದಾರೆ.

'ತಮಿಳುನಾಡಿನೊಂದಿಗಿನ ನನ್ನ ಸಂಬಂಧ ಕೇವಲ ರಾಜಕೀಯವಾದುದಲ್ಲ. ಅದು ಕೌಟುಂಬಿಕವಾದದು. ಪ್ರಾಮಾಣಿಕತೆ ಮತ್ತು ಸಮರ್ಪಣಾ ಭಾವಗಳೊಂದಿಗೆ ನಾನು ಇಲ್ಲಿಗೆ ಬರುತ್ತೇನೆ. ಯಾವುದೇ ಸ್ವಾರ್ಥ ಹಿತಾಸಕ್ತಿಗಳನ್ನು ಇಲ್ಲಿಗೆ ಹೊತ್ತುತರುವುದಿಲ್ಲ. ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ. ನೀವು ಯಾವಾಗಲೂ ನನ್ನೊಂದಿಗೆ ಪ್ರಾಮಾಣಿಕ ಹಾಗೂ ನೇರ ಸಂಬಂಧ ಹೊಂದಿದ್ದೀರಿ' ಎಂದು ಅವರು ತಿಳಿಸಿದ್ದಾರೆ.

ಕೃಷಿ ಕಾಯ್ದೆಗಳ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ರಾಹುಲ್‌ ಗಾಂಧಿ, 'ಮೂರು ಹೊಸ ಕಾಯ್ದೆಗಳು ರೈತರಿಂದ ಎಲ್ಲವನ್ನೂ ಕಿತ್ತುಕೊಳ್ಳಲಿವೆ. ಇದರಿಂದ ರೈತರು ಉದ್ಯಮಿಗಳ ಸೇವಕರಾಗಲಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.