ADVERTISEMENT

ನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್‌ಗೆ ಪಿಎಂ ಮೋದಿ ಔತಣಕೂಟ; ಮುರ್ಮು ಭಾಗಿ

ಪಿಟಿಐ
Published 23 ಜುಲೈ 2022, 3:24 IST
Last Updated 23 ಜುಲೈ 2022, 3:24 IST
ಔತಣಕೂಟದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದ್ರೌಪದಿ ಮುರ್ಮು, ರಾಮನಾಥ ಕೋವಿಂದ್‌ ಹಾಗೂ ನರೇಂದ್ರ ಮೋದಿ (ಪಿಟಿಐ ಚಿತ್ರ)
ಔತಣಕೂಟದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದ್ರೌಪದಿ ಮುರ್ಮು, ರಾಮನಾಥ ಕೋವಿಂದ್‌ ಹಾಗೂ ನರೇಂದ್ರ ಮೋದಿ (ಪಿಟಿಐ ಚಿತ್ರ)   

ನವದೆಹಲಿ: ನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ರಾತ್ರಿ ಔತಣಕೂಟ ಏರ್ಪಡಿಸಿದ್ದರು. ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಸೇರಿದಂತೆ ಹಲವರು ಔತಣಕೂಟದಲ್ಲಿ ಭಾಗವಹಿಸಿದ್ದರು.

ಭೋಜನಕೂಟವು ವಿಶಿಷ್ಟವಾಗಿತ್ತು. ಏಕೆಂದರೆ, ಈ ಕಾರ್ಯಕ್ರಮದಲ್ಲಿ ಎಂದಿನಂತೆ ದೆಹಲಿ ಕೇಂದ್ರಿತ ಜನಸಮೂಹವಷ್ಟೇ ಪಾಲ್ಗೊಂಡಿರಲಿಲ್ಲ.ಪದ್ಮ ಪ್ರಶಸ್ತಿ ಪುರಸ್ಕೃತರು, ಬುಡಕಟ್ಟು ಸಮುದಾಯದ ನಾಯಕರು ಸೇರಿದಂತೆ ದೇಶದ ಎಲ್ಲಾ ಭಾಗದ ಪ್ರಮುಖರು ಔತಣಕೂಟಕ್ಕೆ ಆಗಮಿಸಿದ್ದರುಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, 'ರಾಷ್ಟ್ರಪತಿ ಕೋವಿಂದ್‌ ಅವರನ್ನು ಗೌರವಿಸಲು ಭೋಜನಕೂಟ ಏರ್ಪಡಿಸಲಾಯಿತು. ಶ್ರೀಮತಿ ದ್ರೌಪದಿ ಮುರ್ಮು ಅವರು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಸಚಿವರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಔತಣಕೂಟದಲ್ಲಿ ತಳಮಟ್ಟದ ಹಲವು ಮಂದಿ ಸಾಧಕರು, ಪದ್ಮ ಪ್ರಶಸ್ತಿ ಪುರಸ್ಕೃತರು, ಬುಡಕಟ್ಟು ಸಮುದಾಯದ ಮುಖಂಡರು ಮತ್ತು ಮತ್ತಿತರರನ್ನು ಸ್ವಾಗತಿಸಿದ್ದು ಸಂತಸ ನೀಡಿತು' ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ADVERTISEMENT

ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ, ಮೋದಿ ಸಂಪುಟದ ಹಲವು ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರೂ ಸಮಾರಂಭಕ್ಕೆ ಆಗಮಿಸಿದ್ದರು.

ಕೋವಿಂದ್‌ ಅವರ ಅವಧಿ ಸೋಮವಾರ ಮುಕ್ತಾಯವಾಗಲಿದೆ. ಅದೇ ದಿನ ದ್ರೌಪದಿ ಮುರ್ಮು ಅವರು ಸಂಸತ್‌ನ ಸೆಂಟ್ರಲ್‌ ಹಾಲ್‌ನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಜುಲೈ 18ರಂದು ನಡೆದಿದ್ದ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಒಡಿಶಾದ ದ್ರೌಪದಿ ಮುರ್ಮು, ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಯಶವಂತ ಸಿನ್ಹಾ ವಿರುದ್ಧ ಗೆಲುವು ಸಾಧಿಸಿದ್ದರು. ಗುರುವಾರ (ಜುಲೈ 21) ಫಲಿತಾಂಶ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.