ADVERTISEMENT

ಮಿಜೋರಾಂನ ಮೊದಲ ರೈಲು ಮಾರ್ಗ ಉದ್ಘಾಟಿಸಿದ ಮೋದಿ: ಇಲ್ಲಿದೆ ಸಂಪೂರ್ಣ ಮಾಹಿತಿ

ಪಿಟಿಐ
Published 13 ಸೆಪ್ಟೆಂಬರ್ 2025, 5:38 IST
Last Updated 13 ಸೆಪ್ಟೆಂಬರ್ 2025, 5:38 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಅವರು ಮಿಜೋರಾಂನ ಮೊದಲ ರೈಲು ಮಾರ್ಗವನ್ನು ಉದ್ಘಾಟಿಸಿದರು.</p></div>

ಪ್ರಧಾನಿ ನರೇಂದ್ರ ಮೋದಿ ಅವರು ಮಿಜೋರಾಂನ ಮೊದಲ ರೈಲು ಮಾರ್ಗವನ್ನು ಉದ್ಘಾಟಿಸಿದರು.

   

–ಪಿಟಿಐ ಚಿತ್ರ

ಐಜ್ವಾಲ್‌: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ಮಿಜೋರಾಂನ ಮೊದಲ ರೈಲು ಮಾರ್ಗವನ್ನು ಉದ್ಘಾಟಿಸಿದ್ದಾರೆ. ಜತೆಗೆ, ಐಜ್ವಾಲ್–ದೆಹಲಿ, ಐಜ್ವಾಲ್-ಗುವಾಹಟಿ, ಐಜ್ವಾಲ್-ಕೋಲ್ಕತ್ತ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿದ್ದಾರೆ.

ADVERTISEMENT

ಮಿಜೋರಾಂ ರಾಜಧಾನಿ ಐಜ್ವಾಲ್‌ಗೆ ಸಂಪರ್ಕಿಸುವ ರೈಲು ಮಾರ್ಗ ಕಣಿವೆಗಳ ನಡುವೆ ಅತ್ಯಧಿಕ ಸೇತುವೆ ಮತ್ತು ಸುರಂಗಗಳೊಂದಿಗೆ ಸಿದ್ಧಗೊಂಡಿದೆ. ಐಜ್ವಾಲ್‌ ಕಡಿದಾದ ಬೆಟ್ಟಗಳ ಮೇಲೆ ಇರುವುದರಿಂದ ರೈಲು ಸಂಪರ್ಕ ಕಾಮಗಾರಿ ನಿಧಾನವಾಗಿ ನಡೆದಿದ್ದು, 11 ವರ್ಷಗಳ ಬಳಿಕ ಪೂರ್ಣಗೊಂಡಿದೆ.

ಇದು ಒಟ್ಟು 51.38 ಕಿ.ಮೀ. ಉದ್ದದ ಮಾರ್ಗ. ಇದರಲ್ಲಿ 45 ಸುರಂಗ ಮಾರ್ಗಗಳಿದ್ದು, 55 ದೊಡ್ಡ ಸೇತುವೆ, 87 ಸಣ್ಣ ಸೇತುವೆಗಳು ಇವೆ. 1.86 ಕಿ.ಮೀ. ಉದ್ದದ ಸುರಂಗವು ದೊಡ್ಡ ರೈಲು ಸುರಂಗ ಮಾರ್ಗವಾಗಿದ್ದರೆ, 114 ಮೀಟರ್‌ ಎತ್ತರದ ದೊಡ್ಡ ಸೇತುವೆಯೂ ಇದೆ.

ಈಶಾನ್ಯ ಭಾರತದ ರಾಜ್ಯಗಳ ರಾಜಧಾನಿಗಳಿಗೆ ರೈಲು ಸಂಪರ್ಕ ಇರಲಿಲ್ಲ. ಅರುಣಾಚಲ ಪ್ರದೇಶವನ್ನು ಹೊರತುಪಡಿಸಿ ಉಳಿದ ಏಳು ರಾಜ್ಯಗಳ ರಾಜಧಾನಿಗಳಿಗೆ ರೈಲು ಸಂಪರ್ಕ ಕಾಮಗಾರಿಗೆ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

ಅಸ್ಸಾಂನಿಂದ ಮಿಜೋರಾಂನ ಬೈರಾಬಿವರೆಗೆ ಬ್ರಾಡ್‌ಗೇಜ್‌ ರೈಲು ಮಾರ್ಗ 2016ರಲ್ಲಿ ನಿರ್ಮಾಣವಾಗಿತ್ತು. ಬೈರಾಬಿಗೆ ಮೊದಲ ಸರಕು ರೈಲು ಆ ವರ್ಷ ಬಂದಿತ್ತು. ಇದುವೇ ರಾಜ್ಯದಲ್ಲಿ ಸಂಚರಿಸಿದ ಮೊದಲ ರೈಲು ಆಗಿತ್ತು. ಇದೀಗ ಬೈರಾಬಿಯಿಂದ ಐಜ್ವಾಲ್‌ನ ಸೈರಾಂಗ್‌ವರೆಗೆ ರೈಲು ಮಾರ್ಗವಾಗಿದ್ದು, ಸರಕು ರೈಲುಗಳಲ್ಲದೇ ಪ್ರಯಾಣಿಕರ ರೈಲುಗಳೂ ಸಂಚರಿಸಲಿವೆ.

‘ಐಜ್ವಾಲ್‌ ಮತ್ತು ಕೊಲಸಿಬ್‌ ಜಿಲ್ಲೆಗಳಲ್ಲಿ ಸಾಗುವ ಈ ಮಾರ್ಗವನ್ನು ₹8,070 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬೈರಾಬಿ, ಹೋರ್ಟೋಕಿ, ಕವನ್‌ಪುವಿ, ಮುಆಲ್ಖಾಂಗ್ ಮತ್ತು ಸೈರಾಂಗ್ ನಿಲ್ದಾಣಗಳಿವೆ. ಗಂಟೆಗೆ 100 ಕಿ.ಮೀ. ವೇಗದಲ್ಲಿ ಸಾಗಬಹುದಾದ ಸಾಮರ್ಥ್ಯವನ್ನು ಹೊಂದಿದೆ’ ಎಂದು ಈಶಾನ್ಯ ಗಡಿನಾಡು ರೈಲ್ವೆ (ನಾರ್ತ್‌ ಈಸ್ಟ್‌ ಫ್ರಾಂಟಿಯರ್‌ ರೈಲ್ವೆ) ಅಧಿಕಾರಿ ಕಪಿಂಜಲ್ ಕೆ. ಶರ್ಮಾ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.